ಪುತ್ತೂರು : ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏಪ್ರಿಲ್ 9ರಿಂದ 12ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದರ ಅಂಗವಾಗಿ ರಾಮಹನುಮ ಜ್ಯೋತಿ ರಥಯಾತ್ರೆ Ayodhya Ram Janmabhoomiಗೆ ತೆರಳಿ ಇದೀಗ ಅಯೋಧ್ಯೆ ತಲುಪಿದೆ.


ಅಯೋಧ್ಯೆಯಲ್ಲಿ ರಥಯಾತ್ರೆಗೆ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದ್ದು, ಅಲ್ಲಿ ಪೂಜಿಸಲಾದ ಜ್ಯೋತಿ ಮತ್ತು ಪುಣ್ಯ ಮೃತ್ತಿಕೆಯನ್ನು (ಪವಿತ್ರ ಮಣ್ಣು) ಹನುಮಗಿರಿಗೆ ತರಲಾಗುತ್ತಿದೆ.
ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀರಾಮನ ಪರಮ ಭಕ್ತ ಆಂಜನೇಯ ಜನಿಸಿದ ಎಂದು ನಂಬಲಾದ Anjanadri Hillಗೆ ಭೇಟಿ ನೀಡಿ ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ಬಳಿಕ ಹನುಮಗಿರಿಗೆ ಆಗಮಿಸಲಿದೆ.

ರಾಮ ದೀಕ್ಷೆ ಪಡೆದ ಭಕ್ತರಿಗೆ ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಸಂದರ್ಭದಲ್ಲಿ ಅಯೋಧ್ಯೆಯ ಪುಣ್ಯ ಮೃತ್ತಿಕೆ ಹಾಗೂ ಗಂಗಾಜಲವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ರಥಯಾತ್ರೆ ಅಂಜನಾದ್ರಿ ಮೂಲಕ ಹನುಮಗಿರಿಗೆ ಆಗಮಿಸುತ್ತಿದ್ದು, ಈ ಧಾರ್ಮಿಕ ಕಾರ್ಯದಲ್ಲಿ ಅನೇಕ ಶ್ರೀರಾಮ ಭಕ್ತರು ಭಾಗವಹಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣ ಕಾರ್ಯದ ಉಸ್ತುವಾರಿ ಗೋಪಾಲ್ ಜಿ ಅವರ ನೇತೃತ್ವದಲ್ಲಿ, ರಥಯಾತ್ರೆ ಸಂಚಾಲಕರಾದ ಮುರಳಿಕೃಷ್ಣ ಹಸಂತಡ್ಕ, ಬ್ರಹ್ಮಕಲಶ ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ ಹಾಗೂ ಜಗದೀಶ್ ಶೇಣವ, ಶ್ರೀಧರ್ ತೆಂಕಿಲ, ಜಿತೇಶ್ ಬಲ್ನಾಡು, ಜಯಂತ್ ಕುಂಜೂರುಪಂಜ, ಜೀವನ್ ಬಲ್ನಾಡು, ಸಿ. ಗೋವಿಂದರಾಜು ಯಲಹಂಕ, ನಂದನ್ ತಿಂಗಳಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





