ಪುತ್ತೂರು: ಮಲೆನಾಡಿನ ಭಾಗಗಳಲ್ಲಿ ಮನೆ ಹಿತ್ತಲಲ್ಲಿ ಕೈತೋಟ ಇರುವುದು ಸಾಮಾನ್ಯವಾದರೂ, ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಹಾಗೂ ನಗರೀಕರಣದ ನಡುವೆ ಇಂತಹ ಕೃಷಿ ಅಪರೂಪವಾಗುತ್ತಿದೆ. ಆದರೆ ಈ ಸವಾಲುಗಳ ನಡುವೆಯೂ ಪ್ರಕೃತಿ ತನ್ನ ವಿಸ್ಮಯವನ್ನು ತೋರಿಸುತ್ತಲೇ ಇದೆ.

ಇದಕ್ಕೆ ತಾಜಾ ಉದಾಹರಣೆ ಪುತ್ತೂರಿನ ನೆಟ್ಟಿಣಿಗೆ ಮುದ್ನೋರ್ ಗ್ರಾಮದ ಪೆರ್ನಜೆ ಪ್ರದೇಶದಲ್ಲಿ ಕಂಡುಬಂದಿದೆ. ಇಲ್ಲಿ ಕುಮಾರ್ ಪೆರ್ನಾಜೆ ಅವರ ಮನೆಯ ಹಿತ್ತಲಿನಲ್ಲಿ ಬೆಳೆದ ಗೆಣಸುಗಳ ಫಸಲು ವಿಶಿಷ್ಟವಾಗಿ ಗಮನ ಸೆಳೆದಿದೆ.

ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿರುವ ಗೆಣಸುಗಳು ಇಲ್ಲಿ ಒಂದೂವರೆ ಕೆಜಿಗೂ ಅಧಿಕ ತೂಕ ಹೊಂದಿದ್ದು, ಅವುಗಳ ಆಕಾರವೂ ನೋಡುಗರನ್ನು ಬೆರಗುಗೊಳಿಸುವಂತಿದೆ. ಕೆಲವು ಗೆಣಸುಗಳು ಬಾಟಲಿಯಂತೆ, ಕೆಲವು ಗದೆಯಾಕಾರದಂತೆ, ಇನ್ನೂ ಕೆಲವು ಬೃಹತ್ ತೆಂಗಿನಕಾಯಿ ಗಾತ್ರದಲ್ಲಿ ಭೂಮಿಯಿಂದ ಹೊರಬಂದಿವೆ.
ಈ ಕುರಿತು ಸಂತಸ ವ್ಯಕ್ತಪಡಿಸಿದ ಕೃಷಿಕ ಕುಮಾರ್ ಪೆರ್ನಾಜೆ “ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪ್ರಕೃತಿಯ ವಿಸ್ಮಯಗಳನ್ನು ಮೀರಿಸಲು ಸಾಧ್ಯವಿಲ್ಲ. ಹೊಸ ತಳಿಗಳನ್ನು ಸೃಷ್ಟಿಸಬಹುದು, ಆದರೆ ಪ್ರಕೃತಿಯ ಸಹಜ ಸೌಂದರ್ಯದ ಮುಂದೆ ನಾವು ಶೂನ್ಯ. ಬಯಕೆ ಕಡಿಮೆಯಾದಷ್ಟು ಬದುಕು ಸರಳವಾಗುತ್ತದೆ. ನಾವು ಇಷ್ಟಪಡುವ ಕೃಷಿಯಲ್ಲಿ ಉತ್ತಮ ಬೆಲೆ ಸಿಕ್ಕಾಗ ಸಿಗುವ ತೃಪ್ತಿ ಅಸಾಧಾರಣ,” ಎಂದು ತಿಳಿಸಿದ್ದಾರೆ.
ಪ್ರಕೃತಿಯ ಈ ಅಪೂರ್ವ ಕೊಡುಗೆ ಸ್ಥಳೀಯರ ಗಮನ ಸೆಳೆದಿದ್ದು, ಕೈತೋಟ ಕೃಷಿಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

Leave a Reply

Your email address will not be published. Required fields are marked *