ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಪ್ರಸಿದ್ಧ ನಾಟಕ ತಂಡ “ಮಂದಾರ ಕಲಾವಿದರು” ಅವರು ಏಪ್ರಿಲ್ 4ರಂದು ಪುತ್ತೂರಿನ ಪುರಭವನದಲ್ಲಿ ಬಹು ನಿರೀಕ್ಷಿತ ತುಳು ಭಕ್ತಿ ಪ್ರಧಾನ ಹಾಸ್ಯಮಯ ನಾಟಕ ‘ಮಾಯೊದ ತುಡರ್’ ಅನ್ನು ಪ್ರದರ್ಶಿಸಲಿದ್ದಾರೆ.





ಆರಿಕೋಡಿಯ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಕಳೆದ ಹತ್ತು ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ತಂಡವು ಅನೇಕ ಪ್ರಶಸ್ತಿಗಳನ್ನು ಪಡೆದು ಹೆಸರು ಮಾಡಿದೆ. ತುಳುನಾಡಿನ ಹೆಸರಾಂತ ಕಲಾವಿದ, ಪುತ್ತೂರು ತಾಲೂಕಿನ ಕುಂಬ್ರದ ನಿವಾಸಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗ ದ ರಾಜೆ ಲ. ಸುಂದರ್ ರೈ ಮಂದಾರ ಅವರ ಶಿಷ್ಯರಿಂದ ಸ್ಥಾಪಿತವಾದ ಈ ತಂಡವು ಗುರುಗಳ ಹೆಸರಿನಲ್ಲಿ ರೂಪುಗೊಂಡಿದೆ.


2022ರಲ್ಲಿ “ಮಂದಾರ ಪ್ರಶಸ್ತಿ” ಹೆಸರಿನಲ್ಲಿ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯನ್ನು ಆಯೋಜಿಸಿ, ತುಳು ರಂಗಭೂಮಿಯ ಗಣ್ಯ ಕಲಾವಿದರನ್ನು ಒಂದೇ ವೇದಿಕೆಗೆ ತರಲು ತಂಡ ಯಶಸ್ವಿಯಾಗಿದೆ. ಈ ಸ್ಪರ್ಧೆ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿತು.
ಇನ್ನು 2024ರ ನವೆಂಬರ್ನಲ್ಲಿ ತಂಡದ ಸಾರಥಿ ಮಾಡಾವಿನ ಗುಣಪಾಲ್ ಎಂ.ಎಸ್ ಅವರ ಕಥೆ ಮತ್ತು ಸಂಭಾಷಣೆಯೊಂದಿಗೆ, ಗುರು ಸುಂದರ್ ರೈ ಮಂದಾರ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಮಾಯೊದ ತುಡರ್’ ನಾಟಕವು ತುಳು ರಂಗಭೂಮಿಯಲ್ಲಿ ಈ ವರ್ಷದ ಸೂಪರ್ ಹಿಟ್ ನಾಟಕವಾಗಿ ಹೊರಹೊಮ್ಮಿದೆ. ತಾಲೂಕು, ಜಿಲ್ಲಾ, ಅಂತರ್ ಜಿಲ್ಲೆ ಹಾಗೂ ಗಡಿನಾಡ ಪ್ರದೇಶಗಳಲ್ಲಿ ಈ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ.

ಪುತ್ತೂರು ತಾಲೂಕು ಕ್ರೀಡಾ, ಶೈಕ್ಷಣಿಕ, ವಾಣಿಜ್ಯ ಹಾಗೂ ಕಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಅಭಿವೃದ್ಧಿ ಕಂಡಿದೆ. ಇದೇ ಪವಿತ್ರ ನೆಲದಲ್ಲಿ ತಮ್ಮ ಕನಸಿನ ಪ್ರದರ್ಶನ ನೀಡಲು ಮಂದಾರ ತಂಡ ಸಜ್ಜಾಗಿದೆ.
ಏಪ್ರಿಲ್ 4ರಂದು ಶನಿವಾರ ಸಂಜೆ 7 ಗಂಟೆಗೆ ಪುತ್ತೂರಿನ ಪುರಭವನದಲ್ಲಿ ನಡೆಯಲಿರುವ ಈ ನಾಟಕ ಪ್ರದರ್ಶನ ಉಚಿತ ಪ್ರವೇಶವಾಗಿದ್ದು, ಸಹೃದಯಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಂಡವನ್ನು ಪ್ರೋತ್ಸಾಹಿಸಬೇಕೆಂದು ಮಂದಾರ ಕಲಾವಿದರು ವಿನಂತಿಸಿದ್ದಾರೆ.

