ಪುತ್ತೂರು: ತನ್ನ ಮಗಳ ವಿಚಾರದಲ್ಲಿ ನ್ಯಾಯ ದೊರಕದಿದ್ದರೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭದ ಮುಂದೆ ಧರಣಿಗೆ ಕುಳಿತುಕೊಳ್ಳುವುದಾಗಿ ಸಂತ್ರಸ್ತೆ ತಾಯಿ ನಮಿತಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.





ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಘಟನೆಗೆ ಒಂದು ವರ್ಷ ಕಳೆದರೂ ನ್ಯಾಯ ಸಿಗಿಲ್ಲ. ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ವಿರುದ್ಧ ಆರೋಪವಿದ್ದರೂ, ಇಂದಿಗೂ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ನನ್ನ ಮಗಳಿಗೆ ಆದ ಅನ್ಯಾಯದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.


ಈ ಹಿಂದೆ ಕೃಷ್ಣ ಮತ್ತು ಸಂತ್ರಸ್ತೆಯ ಮದುವೆ ಮಾಡಿಸುವುದಾಗಿ ಪಿ.ಜಿ. ಜಗನ್ನಿವಾಸ ರಾವ್ ಭರವಸೆ ನೀಡಿದ್ದರು. ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದರೂ, ಮದುವೆ ಜವಾಬ್ದಾರಿ ನನ್ನದು ಎಂದು ಹೇಳಿ 9 ತಿಂಗಳು ಕಾಲ ನಮ್ಮನ್ನು ದಾರಿ ತಪ್ಪಿಸಿದರು. ಈಗ ಮಗುವಿಗೆ 10 ತಿಂಗಳು ಆದರೂ ಮದುವೆ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಅವರು, “ಇಷ್ಟೆಲ್ಲಾದರೂ ಅವರ ಧಾರ್ಮಿಕ ಚಟುವಟಿಕೆಗಳ ಬಗ್ಗೆ ನಾನು ಮಾತನಾಡಿರಲಿಲ್ಲ. ಆದರೆ ಇನ್ನು ಮುಂದೆ ಜಗನ್ನಿವಾಸ ರಾವ್ ಅವರನ್ನು ಧಾರ್ಮಿಕ ಕ್ಷೇತ್ರದ ಚಟುವಟಿಕೆಗಳಿಂದ ದೂರವಿಡಬೇಕು. ತಮ್ಮ ಮಗನ ತಪ್ಪಿನ ಅರಿವಿದ್ದರೂ ದೇವರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಂದರ್ಭವನ್ನು ಉಲ್ಲೇಖಿಸಿದ ಅವರು, “ಏಪ್ರಿಲ್ 10ರಂದು ನಡೆಯುವ ಧ್ವಜಾರೋಹಣದ ವೇಳೆ ಧ್ವಜಸ್ತಂಭದ ಮುಂದೆ ಕುಳಿತು ನ್ಯಾಯಕ್ಕಾಗಿ ತಂತ್ರಿಗಳ ಬಳಿ ಮನವಿ ಮಾಡುತ್ತೇನೆ. ದೇವರ ಹೊರತು ಬೇರೆ ಯಾರಿಂದಲೂ ನ್ಯಾಯ ಸಿಗುವುದಿಲ್ಲ” ಎಂದು ಹೇಳಿದರು.
“ಇಲ್ಲಿವರೆಗೂ ಎಲ್ಲರ ಬಳಿ ಮದುವೆ ಮಾಡಿಸಿಕೊಡಿ ಎಂದು ಬೇಡಿಕೊಂಡಿದ್ದೇನೆ. ಆದರೆ ಯಾರ ಮನಸ್ಸೂ ಕರಗಿಲ್ಲ. ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದ ಜಗನ್ನಿವಾಸ ರಾವ್ ಈಗ ತಮ್ಮ ಮಗನನ್ನು ರಕ್ಷಿಸುತ್ತಿದ್ದಾರೆ. ಮೊದಲಿಗೆ ನನ್ನ ಮಗಳಿಗೆ ನ್ಯಾಯ ಕೊಡಿಸಲಿ” ಎಂದು ಅವರು ಆಗ್ರಹಿಸಿದರು.
