ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಕಡಬ ಠಾಣಾ ಪೊಲೀಸರು ಪತ್ತೆ ಹಚ್ಚಿ, 19 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.





ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳದ ಕಡೆಗೆ ಕಂಟೇನರ್ ವಾಹನದಲ್ಲಿ ಅಮಾನುಷವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಕಡಬದ ಕಣ್ವರೆ ಬಳಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದರು.
ಸಬ್ ಇನ್ಸ್ಪೆಕ್ಟರ್ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಕಂಟೇನರ್ ಒಳಗೆ ಕಿಕ್ಕಿರಿದು 19 ಜಾನುವಾರುಗಳನ್ನು ಸಾಗಿಸಲಾಗುತ್ತಿರುವುದು ಪತ್ತೆಹಚ್ಚಿತು. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.


ಬಂಧಿತನನ್ನು ಹೊಸೂರು ಮೂಲದ ಅಕ್ರಮ್ ಪಾಷ ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ರಕ್ಷಿಸಿ ವಶಕ್ಕೆ ಪಡೆಯಲಾಗಿದ್ದು, ಪರಾರಿಯಾದ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


