ಪುತ್ತೂರು: ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದ ಕುರಿತು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದು, “ಕೊಡಿಮರದ ಅಡಿಯಲ್ಲಿ ಕುಳಿತು ನ್ಯಾಯ ಕೇಳುವುದು ದೇವಸ್ಥಾನದ ವಿಷಯವಲ್ಲ, ಇದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯ” ಎಂದು ಹೇಳಿದ್ದಾರೆ.





ಈ ಮೊದಲು ಸಂತ್ರಸ್ಥೆಯ ತಾಯಿ ಸುದ್ದಿಗೋಷ್ಠಿ ನಡೆಸಿ, ದೇವಾಲಯದ ಧಾರ್ಮಿಕ ಕಾರ್ಯಗಳಿಂದ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಅವರನ್ನು ಹೊರಗಿಡಬೇಕು ಎಂದು ಆಗ್ರಹಿಸಿ, ಅದಾಗದಿದ್ದರೆ ಕೊಡಿಮರದ ಅಡಿಯಲ್ಲಿ ಕುಳಿತು ನ್ಯಾಯ ಕೇಳುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅಧ್ಯಕ್ಷರು, “ಪ್ರಕರಣ ಈಗ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ನ್ಯಾಯಾಲಯದ ತೀರ್ಪು ಯಾರ ಪರ ಬರುತ್ತದೆ ಎಂಬುದು ಸ್ಪಷ್ಟವಿಲ್ಲ. ದೇವಾಲಯದ ಪೂರ್ವಶಿಷ್ಟ ಸಾಂಪ್ರದಾಯದಂತೆ ನಾವು ಈಗಿರುವ ವ್ಯವಸ್ಥೆಯನ್ನು ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.
“ದೇವಾಲಯದ ಸಮಿತಿಗೆ ಈ ವಿಷಯದೊಂದಿಗೆ ಯಾವುದೇ ಸಂಬಂಧವಿಲ್ಲ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಅರ್ಚಕರು ಹಾಗೂ ತಂತ್ರಿಗಳು ಪ್ರಮುಖರು. ಇಂದಿನವರೆಗೆ ರವೀಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಯಗಳನ್ನು ನಡೆಸಲಾಗಿದೆ. ಈ ವಿಚಾರವನ್ನೂ ಅವರ ಗಮನಕ್ಕೆ ತಂದು, ಅವರ ಮಾರ್ಗದರ್ಶನದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಜಗನ್ನಿವಾಸ್ ರಾವ್ ಅವರಿಗೆ ದೇವಾಲಯದ ಕಾರ್ಯದಲ್ಲಿ ಅವಕಾಶ ನೀಡಬಾರದೆಂದು ಅರ್ಜಿ ಬಂದಿರುವುದನ್ನು ದೃಢಪಡಿಸಿದ ಅವರು, “ಅರ್ಜಿಯನ್ನು ಪರಿಶೀಲಿಸಿ ತಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಅವರನ್ನು ದೇವಸ್ಥಾನಕ್ಕೆ ಕರೆಸಿಕೊಂಡದ್ದೂ ಸಮಿತಿ ಅಲ್ಲ, ಅವರನ್ನು ಹೊರಗಿಡುವ ಅಥವಾ ಸೇರಿಸುವ ಅಧಿಕಾರವೂ ಸಮಿತಿಗೆ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, “ಜಗನ್ನಿವಾಸ್ ರಾವ್ ಅಥವಾ ಸಂಬಂಧಪಟ್ಟ ಕುಟುಂಬದವರು ಈ ವಿಚಾರವಾಗಿ ಸಮಿತಿಯನ್ನು ಸಂಪರ್ಕಿಸಿಲ್ಲ. ರಾಜಕೀಯ ಅಥವಾ ವೈಯಕ್ತಿಕ ವಿಚಾರಗಳನ್ನು ದೇವಸ್ಥಾನದ ಒಳಗೆ ತರಬಾರದು. ದೇವಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಕೊಡಿಮರದ ಅಡಿಯಲ್ಲಿ ಅಥವಾ ದೇವಾಲಯದ ಆವರಣದಲ್ಲಿ ವೈಯಕ್ತಿಕ ವಿಚಾರಗಳನ್ನು ಮುಂದಿಡಲು ಅವಕಾಶ ಇಲ್ಲ” ಎಂದು ತಿಳಿಸಿದ್ದಾರೆ.



