ಬೆಳ್ತಂಗಡಿ: ತಾಲೂಕಿನ ನೆರಿಯಾ ಗ್ರಾಮದ ಅಲವೂರು ಪ್ರದೇಶದಲ್ಲಿ ರಬ್ಬರ್ ತೋಟದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಉಂಟುಮಾಡಿದೆ.
ಅಲಊರಿನ ಬಾಬಿ ಅವರ ಎಸ್ಟೇಟ್‌ಗೆ ಸೇರಿದ ರಬ್ಬರ್ ತೋಟದಲ್ಲಿ ಏಪ್ರಿಲ್ 5ರ ಮುಂಜಾನೆ ಈ ಘಟನೆ ನಡೆದಿದೆ. ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಾಗಿ ತೆರಳಿದ್ದ ನಾಗಮ್ಮ ಎಂಬ ಮಹಿಳಾ ಕಾರ್ಮಿಕರಿಗೆ ತೋಟದಲ್ಲಿ ಚಿರತೆಯೊಂದು ಸಂಚರಿಸುತ್ತಿರುವುದು ಕಂಡುಬಂದಿದೆ.
ಚಿರತೆಯನ್ನು ಕಂಡ ನಾಗಮ್ಮ ಅವರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಅದರ ವಿಡಿಯೋ ಮತ್ತು ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರಲ್ಲಿ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.




ಇತ್ತೀಚಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಯಾವುದೇ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳದಿದ್ದರೂ, ಇದೀಗ ಜನವಸತಿ ಸಮೀಪದ ತೋಟಗಳಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರ ನಿದ್ದೆ ಕದಡಿಸಿದೆ. ಮುಂಜಾನೆ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಶಾಲಾ ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ.
ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



