ಪುತ್ತೂರು: ಹನುಮಗಿರಿಯ ಕೋದಂಡರಾಮ–ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏಪ್ರಿಲ್ 9ರಿಂದ 12ರವರೆಗೆ ಬ್ರಹ್ಮಕಲಶೋತ್ಸವವು ಹೊಸ ಕಲ್ಪನೆಗಳೊಂದಿಗೆ ಸಮಾಜಕ್ಕೆ ಸಂದೇಶ ಸಾರುವ ಕಾರ್ಯಕ್ರಮಗಳೊಂದಿಗೆ ವಿಶಿಷ್ಟವಾಗಿ ನಡೆಯಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಹೊಸ ಗೋಪುರ ನಿರ್ಮಾಣ, ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ದೇವರ ಪೀಠಗಳಿಗೆ ಹಿತ್ತಾಳೆ ಕವಚ ಅಳವಡಿಕೆ, ಸುಂದರ ವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದರು.






ಏಪ್ರಿಲ್ 10ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟನೆ ನೆರವೇರಿಸಲಿದ್ದು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗಶಾಲೆ ಉದ್ಘಾಟಿಸಲಿದ್ದಾರೆ.
ವಿಶಾಲ ಯಾಗಮಂಟಪ, ಲವ-ಕುಶ ಹೆಸರಿನ ಎರಡು ಪ್ರತ್ಯೇಕ ಸಾಂಸ್ಕೃತಿಕ ವೇದಿಕೆಗಳು, ಪಾಕಶಾಲೆ-ಭೋಜನಾಲಯ ವ್ಯವಸ್ಥೆ, ಹಸಿರುವಾಣಿ ಸಂಗ್ರಹಣಾ ಕೊಠಡಿಗಳು ಸೇರಿದಂತೆ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಏಪ್ರಿಲ್ 8ರಂದು ಉಗ್ರಾಣ ಮುಹೂರ್ತ ನಡೆಯಲಿದ್ದು, ಮಹಾಲಿಂಗೇಶ್ವರ ದೇವಾಲಯದಿಂದ ದರ್ಬೆ ತನಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬಳಿಕ ವಾಹನ ಜಾಥಾದ ಮೂಲಕ ಹನುಮಗಿರಿಗೆ ಹಸಿರುವಾಣಿ ಸಮರ್ಪಿಸಲಾಗುವುದು.
ಗ್ರಾಮ ಪರ್ಯಟನೆ ನಡೆಸುತ್ತಿರುವ ಶ್ರೀರಾಮ-ಹನುಮ ಜ್ಯೋತಿ ರಥಯಾತ್ರೆ ಏಪ್ರಿಲ್ 9ರಂದು ಹನುಮಗಿರಿ ಪ್ರವೇಶಿಸಲಿದ್ದು, ಈಶ್ವರಮಂಗಲ ಪಂಚಲಿಂಗೇಶ್ವರ ದೇವಾಲಯದಿಂದ ಅದ್ಧೂರಿ ಮೆರವಣಿಗೆ ನಡೆಯಲಿದೆ.


ಏಪ್ರಿಲ್ 11ರಂದು ಶ್ರೀರಾಮ ತಾರಕ ಯಾಗ ನಡೆಯಲಿದ್ದು, ಏಪ್ರಿಲ್ 12ರಂದು ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ರಾತ್ರಿ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಪೀಠಾಧಿಪತಿಗಳು, ಸಾಧು-ಸಂತರು, ಮಠಾಧೀಶರು ಹಾಗೂ ರಾಜವಂಶಸ್ಥರು ಭಾಗವಹಿಸಲಿದ್ದಾರೆ. ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 300ಕ್ಕೂ ಅಧಿಕ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ, ಉಪಾಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಮುರಳೀಕೃಷ್ಣ ಹಸಂತಡ್ಕ, ಬೂಡಿಯಾರ್ ರಾಧಾಕೃಷ್ಣ ರೈ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀರಾಮ ಪಕ್ಕಳ ಕರ್ನೂರುಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ ಪಳನೀರು ಉಪಸ್ಥಿತರಿದ್ದರು.

