ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರೋತ್ಸವದ ವೇಳೆ ಧ್ವಜಾರೋಹಣ ಕುರಿತಂತೆ ವಿವಾದ ತೀವ್ರಗೊಂಡಿದ್ದು, ಅನಧಿಕೃತ ವ್ಯಕ್ತಿಗಳಿಗೆ ಅವಕಾಶ ನೀಡಿದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಶೈವ ಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್. ಸುಬ್ರಹ್ಮಣ್ಯ ಎಚ್ಚರಿಕೆ ನೀಡಿದ್ದಾರೆ.






ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡಲು ಅಧಿಕೃತವಾಗಿ ನಾಗೇಶ್ ಮತ್ತು ಬಾಲಕೃಷ್ಣ ಎಂಬ ಇಬ್ಬರು ಪದಾರ್ಥಿ ಸಿಬ್ಬಂದಿಗಳು ಇದ್ದಾರೆ. ಇವರನ್ನು ಬಿಟ್ಟು ಪಿ.ಜಿ. ಜಗನ್ನಿವಾಸ್ ರಾವ್ ಅನಧಿಕೃತವಾಗಿ ಕಳೆದ ಕೆಲವು ವರ್ಷಗಳಿಂದ ಧ್ವಜಾರೋಹಣ ಮಾಡುತ್ತಿರುವುದು ನಿಯಮಬಾಹಿರವಾಗಿದೆ ಎಂದು ಆರೋಪಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ದೇವಸ್ಥಾನದಿಂದ ನೀಡಲಾದ ಉತ್ತರದಲ್ಲಿ ಜಗನ್ನಿವಾಸ್ ರಾವ್ ಅವರಿಗೆ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿರುವುದಾಗಿ ಅವರು ಹೇಳಿದರು. “ಹಾಗಾದರೆ ಅವರು ಯಾವ ಆಧಾರದಲ್ಲಿ ಧ್ವಜಾರೋಹಣ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಕಳೆದ ವರ್ಷ ಬ್ರಹ್ಮರಥೋತ್ಸವದ ವೇಳೆ ದೇವರು ರಥ ಏರುವ ಮುನ್ನವೇ ಜಗನ್ನಿವಾಸ್ ರಾವ್ ರಥ ಏರಿದ ಘಟನೆ ಉಲ್ಲೇಖಿಸಿದ ಅವರು, ಇದು ಶಾಸ್ತ್ರಸಮ್ಮತವಲ್ಲ ಎಂದು ಹೇಳಿದರು. “ದೇವಸ್ಥಾನದ ನೌಕರನಲ್ಲದ, ಆನುವಂಶಿಕ ಹಕ್ಕಿಲ್ಲದ, ದತ್ತಿ ಇಲಾಖೆಯಿಂದ ಅಥವಾ ತಂತ್ರಿಗಳಿಂದ ಅನುಮತಿ ಇಲ್ಲದ ವ್ಯಕ್ತಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ” ಎಂದು ಅವರು ಹೇಳಿದರು.
ಜಗನ್ನಿವಾಸ್ ರಾವ್ ಭಕ್ತನಾಗಿ ದೇವಸ್ಥಾನಕ್ಕೆ ಬರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಗರ್ಭಗುಡಿಯ ಎಡನಾಳಿಗೆ ಪ್ರವೇಶ ಮಾಡುವುದೇ ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಶ್ನಿಸಿದ ಅವರು, ಈ ಬಾರಿಯ ಜಾತ್ರೆಯಲ್ಲೂ ಧ್ವಜಾರೋಹಣ ಅಥವಾ ಬ್ರಹ್ಮರಥ ಏರುವಂತಹ ಕ್ರಮ ನಡೆದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
“ನಮ್ಮ ವೇದಿಕೆ ಹಲವು ವರ್ಷಗಳಿಂದ ದೇವಸ್ಥಾನಗಳಲ್ಲಿ ನಡೆಯುವ ಅವ್ಯವಸ್ಥೆಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದೆ. ಈಗಾಗಲೇ ಅನೇಕ ಪ್ರಕರಣಗಳಲ್ಲಿ ಕಾನೂನುಬದ್ಧ ಜಯವೂ ಸಾಧಿಸಿದ್ದೇವೆ” ಎಂದು ಅವರು ಹೇಳಿದರು.


