ಸುಳ್ಯ: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಾನೂನು ಕ್ರಮ ಕಠಿಣಗೊಳ್ಳುತ್ತಿದ್ದು, ಐವರ್ ನಾಡು ಗ್ರಾಮದ ಬೇಂಗಮಲೆ ಪ್ರದೇಶದಲ್ಲಿ ರಸ್ತೆಬದಿ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಸುಳ್ಯದ ಗಾಂಧಿನಗರದಲ್ಲಿರುವ “ಅಯೋಧ್ಯ ಮೆನ್ಸ್ ಡ್ರೆಸ್ ಅಂಡ್ ಸ್ಪೋರ್ಟ್ಸ್ ಜರ್ಸಿ ಶಾಪ್” ಮಾಲೀಕ ಅಕ್ಷಯ ರಜಪೂತ ಕಲ್ಲಡ್ಕ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 15, 2025ರಂದು ಐವರ್ ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರೆ–ಸುಳ್ಯ ರಸ್ತೆಯ ಬೇಂಗಮಲೆ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಪತ್ತೆಯಾಯಿತು. ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್ ಪಿಡಿಒ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಮೂರು ದೊಡ್ಡ ಚೀಲಗಳಲ್ಲಿ ಕಸ ತುಂಬಿರುವುದು ಕಂಡುಬಂದಿತು.
ಚೀಲಗಳನ್ನು ತೆರೆಯಿಸಿ ಪರಿಶೀಲಿಸಿದಾಗ ಅವುಗಳಲ್ಲಿ ಅಯೋಧ್ಯ ಮೆನ್ಸ್ ಡ್ರೆಸ್ ಮಳಿಗೆಗೆ ಸಂಬಂಧಿಸಿದ ಬಿಲ್ಲುಗಳು, ಜಾತ್ರಾ ಆಮಂತ್ರಣ ಪತ್ರಿಕೆಗಳು ಹಾಗೂ ಮೆಸ್ಕಾಂ ಬಿಲ್ಲುಗಳು ಪತ್ತೆಯಾಗಿದ್ದು, ಕಸದ ಮೂಲವನ್ನು ಪತ್ತೆಹಚ್ಚಲು ಸಹಾಯವಾಯಿತು. ಒಂದು ವಾರದ ಅವಧಿಯಲ್ಲಿ ಮೂರು ಬಾರಿ ಇದೇ ರೀತಿಯಾಗಿ ತ್ಯಾಜ್ಯ ಎಸೆಯಲಾಗಿದೆ ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಕುರಿತು ಅಂಗಡಿ ಮಾಲೀಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ದಂಡ ಪಾವತಿಸಲು ಸೂಚಿಸಲಾಗಿತ್ತು. ಆದರೆ ಅವರು ದಂಡ ಪಾವತಿಸಲು ನಿರಾಕರಿಸಿ ಮೊತ್ತ ಕಡಿಮೆ ಮಾಡುವಂತೆ ಚೌಕಾಸಿ ನಡೆಸಿರುವುದಾಗಿ ತಿಳಿದುಬಂದಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದಾದ ಅಪಾಯಕಾರಿ ಕೃತ್ಯವಾಗಿರುವುದರಿಂದ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿತ್ತು. ಜಿಲ್ಲಾಮಟ್ಟದ ಅಧಿಕಾರಿಗಳ ಸೂಚನೆಯಂತೆ ಪಂಚಾಯತ್ ಪಿಡಿಒ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *