ಕಡಬ: ನೂಜಿಬಾಳ್ತಿಲ ಗ್ರಾಮದ ಕನ್ವರೆ ಪ್ರದೇಶದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 19 ಗೋವುಗಳನ್ನು ಏಪ್ರಿಲ್ 3ರಂದು ಕಡಬ ಪೊಲೀಸರು ವಶಕ್ಕೆ ಪಡೆದಿದ್ದರೂ, ಐದು ದಿನಗಳಿಂದ ಠಾಣಾ ಆವರಣದಲ್ಲಿ ಕಟ್ಟಿಹಾಕಿರುವುದರಿಂದ ಬಿಸಿಲಿನ ತಾಪಕ್ಕೆ ಜಾನುವಾರುಗಳು ಹೈರಾಣಾಗಿರುವ ಘಟನೆ ಬೆಳಕಿಗೆ ಬಂದಿದೆ.





ಕಡಬ ಠಾಣೆಯ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕಂಟೈನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ರಕ್ಷಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊಸೂರು ಗ್ರಾಮದ ಇರ್ಫಾನ್, ಪರಾರಿಯಾದ ಚಾಲಕ ನಯಾಜ್ ಹಾಗೂ ಕಂಟೈನರ್ ಮಾಲೀಕ ಅಬ್ದುಲ್ ರಹಿಮಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆದರೆ ಪ್ರಕರಣ ನಡೆದ ಐದು ದಿನ ಕಳೆದರೂ ಜಾನುವಾರುಗಳನ್ನು ಠಾಣಾ ವಠಾರದಲ್ಲೇ ಇರಿಸಲಾಗಿದ್ದು, ಉರಿಬಿಸಿಲಿನಿಂದ ಗೋವುಗಳು ಸುಸ್ತಾಗಿವೆ. ಈ ಮಧ್ಯೆ ಅವುಗಳಿಗೆ ಹುಲ್ಲು ಹಾಗೂ ನೀರಿನ ವ್ಯವಸ್ಥೆ ಮಾಡುವುದು ದೊಡ್ಡ ಸವಾಲಾಗಿದೆ.


ಇದಕ್ಕಾಗಿ ಹಿಂದೂ ಸಂಘಟನೆಯ ಪ್ರಮುಖರು ದಿನನಿತ್ಯ ಸುತ್ತಮುತ್ತಲಿನ ಕೃಷಿ ತೋಟಗಳಿಂದ ಹುಲ್ಲು ಸಂಗ್ರಹಿಸಿ ಗೋವುಗಳಿಗೆ ಆಹಾರ ಒದಗಿಸುತ್ತಿದ್ದು, ನೀರು ಕುಡಿಸುವ ಕಾರ್ಯದಲ್ಲೂ ತೊಡಗಿದ್ದಾರೆ. ಗೋಶಾಲೆಗೆ ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆದಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಉರಿಬಿಸಿಲಿನ ನಡುವೆ ಜಾನುವಾರುಗಳ ಸ್ಥಿತಿ ಹದಗೆಡುತ್ತಿರುವುದರಿಂದ, ತಕ್ಷಣವೇ ಗೋವುಗಳನ್ನು ಸುರಕ್ಷಿತವಾಗಿ ಗೋಶಾಲೆಗೆ ಸ್ಥಳಾಂತರಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.


