ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ಆರಂಭಗೊಳ್ಳುವ ವರ್ಷಾವಧಿ ಜಾತ್ರೋತ್ಸವು ದೇವಳದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ದೊರೆಯಿತು.
ಬೆಳಗ್ಗೆ 9.20ರ ನಂತರದ ವೃಷಭ ಲಗ್ನದಲ್ಲಿ ಸುಮಾರು 10.38ರ ಸಮಯಕ್ಕೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.

ಏಪ್ರಿಲ್ 10 ರಿಂದ ಆರಂಭಗೊಂಡಿರುವ ಈ ವರ್ಷಾವಧಿ ಜಾತ್ರೋತ್ಸವವು ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಏಪ್ರಿಲ್ 17ರಂದು ನಡೆಯಲಿರುವ ಪ್ರಸಿದ್ಧ ‘ಪುತ್ತೂರು ಬೆಡಿ’ (ಸಿಡಿಮದ್ದು ಪ್ರದರ್ಶನ) ಮತ್ತು ರಥೋತ್ಸವವು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಲಕ್ಷಾಂತರ ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.




ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಪುತ್ತೂರು ನಗರವು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು, ದೇವಸ್ಥಾನಕ್ಕೆ ಭವ್ಯವಾದ ದೀಪಾಲಂಕಾರ ಮಾಡಲಾಗಿದೆ.
ಪುತ್ತೂರಿನ ಆಸುಪಾಸಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಧ್ವಜಾರೋಹಣವನ್ನು ಕಣ್ಣುಂಬಿಕೊಂಡು ಮಹಾಲಿಂಗೇಶ್ವರನ ಕೃಪೆಗೆ ಪಾತ್ರರಾದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಈಶ್ವರ್ ಭಟ್ ಪಂಜಿಗುಡ್ಡೆ, ಸಮಿತಿಯ ಸದಸ್ಯರು ಹಾಗೂ ದೇವಳದ ಪ್ರಮುಖರು ಉಪಸ್ಥಿತರಿದ್ದರು.



