ಕಡಬ : ಕ್ಷೇತ್ರದ ಪ್ರಮುಖ ಸಂಪರ್ಕ ರಸ್ತೆಯಾದ ಕಡಬ–ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿ ಡಾಂಬರು ಕೊರತೆಯಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





ರಸ್ತೆ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಕಡಬದಿಂದ ಕಲ್ಲಂತಡ್ಕದವರೆಗೆ ಹಾಳಾಗಿದ್ದ ಮೂರು ಕಡೆಗಳಲ್ಲಿ ರಸ್ತೆ ಎತ್ತಾಯಿಸಿ ಕಾಂಕ್ರೀಟ್ ಹಾಕಲಾಗಿತ್ತು. ಬಳಿಕ ಎರಡನೇ ಹಂತದ ಕಾಮಗಾರಿಗಾಗಿ ಮತ್ತೊಂದು ಒಂದು ಕೋಟಿ ರೂ ಮಂಜೂರಾಗಿದ್ದು, ಒಟ್ಟು ಎರಡು ಕೋಟಿ ರೂ ಅನುದಾನ ಲಭ್ಯವಿದ್ದರೂ ಕಾಮಗಾರಿ ನಿರೀಕ್ಷಿತ ಗತಿಯಲ್ಲಿಲ್ಲ.
ಗುತ್ತಿಗೆದಾರನ ನಿರಾಸಕ್ತಿ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಳ್ಯ ವಿಭಾಗದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೋಪಾಲ್ ಅವರು, “ಡಾಂಬರು ಕೊರತೆಯಿಂದ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ” ಎಂದು ತಿಳಿಸಿದ್ದಾರೆ.

ಬೆಂಗಳೂರು ಮೂಲದ ಗುತ್ತಿಗೆದಾರನಿಗೆ ಜುಲೈ 2025 ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗಡುವು ನೀಡಲಾಗಿದ್ದರೂ, ಪ್ರಸ್ತುತ ಕೆಲಸ ಅರ್ಧಕ್ಕೆ ನಿಂತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.
ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಕಷ್ಟ ನಿವಾರಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

