ಪುತ್ತೂರು: ಸೇವೆ ಮತ್ತು ಸಮರ್ಪಣೆ ಮನುಷ್ಯನ ಜೀವನ ವಿಧಾನವಾಗಬೇಕು ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಅವರು ಹನುಮಗಿರಿ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಮುಖಗೋಪುರವನ್ನು ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.



ಹನುಮನು ಕಠಿಣ ಸಂದರ್ಭಗಳಲ್ಲಿಯೂ ಸತ್ಯ ಮತ್ತು ವಿಧೇಯತೆಯ ಹಾದಿಯಲ್ಲಿ ನಡೆದ ಮಹಾನ್ ವ್ಯಕ್ತಿತ್ವವಾಗಿದ್ದು, ಅಖಂಡ ಭಕ್ತಿಯ ಪ್ರತೀಕ. ಶ್ರೀರಾಮನು ಆದರ್ಶಪ್ರಾಯ ವ್ಯಕ್ತಿ ಎಂದು ಅವರು ಹೇಳಿದರು. ವಿಶ್ವ ಕಲ್ಯಾಣ ಮತ್ತು ಶಾಂತಿ ನಮ್ಮ ಸಂಸ್ಕೃತಿಯ ಮೂಲಭೂತ ಅಂಶಗಳಾಗಿದ್ದು, ಆಧ್ಯಾತ್ಮಿಕತೆ ಅದಕ್ಕೆ ಶಕ್ತಿ ತುಂಬುತ್ತದೆ ಎಂದರು.
ಶ್ರದ್ಧಾಕೇಂದ್ರಗಳು ಸಮಾಜದಲ್ಲಿ ಶಾಂತಿ ಮತ್ತು ಪ್ರೇರಣೆಯನ್ನು ಮೂಡಿಸುವ ಕೇಂದ್ರಗಳಾಗಿವೆ. ದೇವಾಲಯಗಳು ಸನಾತನ ಪರಂಪರೆ ಮತ್ತು ಭಾರತೀಯ ಸಂಸ್ಕೃತಿಯ ಪ್ರತೀಕಗಳಾಗಿದ್ದು, ಬ್ರಹ್ಮಕಲಶೋತ್ಸವವು ಹೊಸ ಚೈತನ್ಯವನ್ನು ಉಂಟುಮಾಡುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು. ಐತಿಹಾಸಿಕ ಹಿನ್ನೆಲೆಯುಳ್ಳ ಹನುಮಗಿರಿ ಕ್ಷೇತ್ರವು ಭಕ್ತರಲ್ಲಿ ಸಂಸ್ಕೃತಿ, ದೇಶಪ್ರೇಮ ಹಾಗೂ ಸಮರ್ಪಣಾಭಾವವನ್ನು ಹೆಚ್ಚಿಸಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಮಾತನಾಡಿ, ದೇವಭಕ್ತಿ ಮತ್ತು ದೇಶಭಕ್ತಿ ಹನುಮಗಿರಿ ಕ್ಷೇತ್ರದಲ್ಲಿ ಸಮನ್ವಯಗೊಂಡಿವೆ. ಬ್ರಹ್ಮಕಲಶೋತ್ಸವವನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ರೂಪಿಸಲಾಗಿದೆ ಎಂದು ಹೇಳಿದರು. ರಾಮ ಮತ್ತು ಹನುಮರ ಆದ್ವೈತ ಜ್ಯೋತಿ ಇಲ್ಲಿ ಒಂದಾಗಿದೆ ಎಂದು ವಿವರಿಸಿದರು.



ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾವಿಕವಾಗಿ ಮಾತನಾಡಿ, ಹನುಮಗಿರಿ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಧರ್ಮ ಜಾಗೃತಿ ಮೂಡುತ್ತಿದೆ. ಅಯೋಧ್ಯೆಯಿಂದ ಜ್ಯೋತಿ, ರಾಮ ಜಪದೀಕ್ಷೆ ಮೊದಲಾದ ಕಾರ್ಯಕ್ರಮಗಳ ಮೂಲಕ ಬ್ರಹ್ಮಕಲಶೋತ್ಸವವು ವಿಶ್ವ ಕಲ್ಯಾಣದ ಸಂಕಲ್ಪದೊಂದಿಗೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




