ಕಡಬ, ಎ. 12: ಏಲಂನಲ್ಲಿ ವ್ಯಾಪಾರದ ಹಕ್ಕು ಪಡೆದು ಹಸಿಮೀನು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿರುವುದಕ್ಕೆ ಆಕ್ರೋಶಿತರಾಗಿರುವ ವ್ಯಾಪಾರಸ್ಥರು ಕಡಬ ಪ.ಪಂ. ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.

ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವ್ಯಾಪಾರಸ್ಥರಾದ ಮ್ಯಾಥ ಕೆ.ಎಂ.(ರಾಜು) ಹಾಗೂ ಆದಂ ಸಾಹೇಬ್ ಕಡಬ ಅವರು, ಪಟ್ಟಣ ಪಂಚಾಯತ್ ನವರು ಯಾವುದೇ ಆಧಾರಗಳಿಲ್ಲದೆ ನಾವು ಅವಧಿ ಮೀರಿದ ಮೀನು ಮಾರಾಟ ಮಾಡುತ್ತಿದ್ದೇವೆ ಎಂದು ಆರೋಪಿಸಿರುವುದು ಸರಿಯಲ್ಲ ಎಂದರು. ಅಧಿಕಾರಿಗಳು ಯಾರೋ ದೂರು ನೀಡಿದ ಕೂಡಲೇ ಯಾವುದೇ ತನಿಖೆ ನಡೆಸದೆ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಿರುವುದು ನೋವು ತಂದಿದೆ. ಪ್ರತೀ ದಿನ ನಾವು ಮಂಗಳೂರಿಗೆ ಹೋಗಿ ಮೀನು ತಂದು ತಾಜಾ ಮೀನುಗಳನ್ನೇ ಮಾರಾಟ ಮಾಡುತ್ತಿದ್ದೇವೆ. ಅವರು ಮೀನಿನ ಲ್ಯಾಬ್ ಟೆಸ್ಟ್ ಮಾಡಿ ನೋಟೀಸ್
ನೀಡಿದ್ದರೆ ಒಪ್ಪಬಹುದಿತ್ತು.

ಆರೋಪ ಸಾಬೀತುಪಡಿಸಿದರೆ ಮೀನಿನ ಅಂಗಡಿ ಬಂದ್ ಮಾಡುತ್ತೇನೆಂದು ಸವಾಲು ಹಾಕಿದರು.

ಮಂಗಳೂರಿನಿಂದ ಕಡಬ ತನಕ ಎಲ್ಲಿಯೂ ಹಸಿಮೀನು ಮಾರುಕಟ್ಟೆಯಲ್ಲಿ ದರ ಪಟ್ಟಿಹಾಕುವುದಿಲ್ಲ. ಕಡಬದಲ್ಲಿ ಮಾತ್ರ ಈ ನಿಯಮ ಯಾಕೆ ಎಂದು ಪ್ರಶ್ನಿಸಿದ ಮೈಧೂ, ಒಂದು ಸ್ಟಾಲ್‌ಗೆ ಜಿಎಸ್‌ಟಿ ಸೇರಿದಂತೆ ರೂ. 6,83,000 ಪಾವತಿಸಿ ಏಲಂನಲ್ಲಿಪಡೆದುಕೊಂಡಿದ್ದೇನೆ. ಆ ಪ್ರಕಾರ ಸ್ಟಾಲ್‌ಗೆ ದಿನಕ್ಕೆ 7,500 ರೂ. ಆಗುತ್ತದೆ. ನಾವು ಪೂರ್ತಿ ಹಣ ಪಾವತಿಸಿದರೂ ಮೀನು ಮಾರುಕಟ್ಟೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಒಂದು ಶೌಚಾಲಯ ಕೂಡ ಇಲ್ಲ. ಇಲ್ಲಿ 10-20 ಜನ ಕೆಲಸ ಮಾಡುತ್ತಾರೆ. ಅವರೆಲ್ಲರೂ ಶೌಚಾಲಯಕ್ಕಾಗಿ ಬೇರೆಡೆಗೆ ಹೋಗಬೇಕು. ಏಲಂ ಸಂದರ್ಭದಲ್ಲಿ ಒಂದು ವಾರದೊಳಗೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದು ಮುಖ್ಯಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅದು ಈವರೆಗೆ ಈಡೇರಿಲ್ಲ ಎಂದು ದೂರಿದರು.

Leave a Reply

Your email address will not be published. Required fields are marked *