ಪಡ್ನೂರು: ದಿನಾಂಕ 12/04/2026 ರ ಆದಿತ್ಯವಾರದಂದು ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಸೇವಾ ಟ್ರಸ್ಟ್ (ರಿ) ಗಾಂಧಿನಗರ ಮಂಗಳೂರು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಹಾಗೂ ಶ್ರೀರಾಮ್ ಫ್ರೆಂಡ್ಸ್ (ರಿ) ಪಡ್ನೂರು ಸಂಘಟನೆಯ ಸಂಯುಕ್ತ ಸಹಕಾರದಲ್ಲಿ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪುತ್ತಿಲ ಪರಿವಾರವು ಸಮಾಜಮುಖಿ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗತ್ಯವಾದ ಆರೋಗ್ಯ ಹಾಗೂ ಇತರ ಸಹಾಯಗಳನ್ನು ಒದಗಿಸುತ್ತಿದೆ ಎಂದರು. ಪಡ್ನೂರು ಭಾಗದಲ್ಲಿಯೂ ಶ್ರೀರಾಮ್ ಫ್ರೆಂಡ್ಸ್ ಸಂಘಟನೆಯ ಸಹಕಾರದೊಂದಿಗೆ ಇಂತಹ ಶಿಬಿರ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಊರಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಡ್ನೂರಿನ CHO ಶ್ರೀಮತಿ ಸೌಮ್ಯ, ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಮಹಾದೇವಿ ವಿಶ್ವಸ್ಥ ಮಂಡಳಿ ಕಬಕ ಕಾರ್ಯದರ್ಶಿ ವಸಂತ ಗೌಡ ನೆಕ್ರಾಜೆ, ಯೆನೆಪೋಯ ದಂತ ವಿಭಾಗದ ಡಾ. ಜುನೈಧ್ ಹಾಗೂ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆಯ ಡಾ. ರವಿಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀ ರಾಮ್ ಭಟ್ ಪಾತಾಳ ವಹಿಸಿದ್ದರು.

ಶಿಬಿರದಲ್ಲಿ ಒಟ್ಟು 104 ಮಂದಿ ಫಲಾನುಭವಿಗಳು ಭಾಗವಹಿಸಿ ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಿಸಿಕೊಂಡರು. 50 ಮಂದಿಗೆ ಕಣ್ಣಿನ ಪರೀಕ್ಷೆ ನಡೆಸಲಾಗಿದ್ದು, 27 ಮಂದಿಗೆ ಕನ್ನಡಕದ ಅಗತ್ಯ ಕಂಡುಬಂದ ಕಾರಣ ಅವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಮೂವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಅವರಿಗೆ ಉಚಿತ ಚಿಕಿತ್ಸೆ ವ್ಯವಸ್ಥೆಗಾಗಿ ಗುರುತು ಚೀಟಿ ನೀಡಲಾಯಿತು.
ಇದಲ್ಲದೆ, 40 ಮಂದಿಗೆ ದಂತ ಪರೀಕ್ಷೆ ನಡೆಸಲಾಗಿದ್ದು, ಕೆಲವು ಮಂದಿಗೆ ಫಿಲ್ಲಿಂಗ್ ಹಾಗೂ ಕ್ಲೀನಿಂಗ್ ಅಗತ್ಯವಿದ್ದು, ಉಚಿತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಯಿತು. 17 ಮಂದಿ ಹಲ್ಲುಗಳ ಕ್ಲೀನಿಂಗ್ ಮಾಡಿಸಿಕೊಂಡರು. 19 ಮಂದಿ ಇಸಿಜಿ ಪರೀಕ್ಷೆ ಹಾಗೂ 12 ಮಂದಿ ಥೈರಾಯ್ಡ್ ಪರೀಕ್ಷೆ ನಡೆಸಿಕೊಂಡರು. ಹಲವರು ಬಿಪಿ, ಶುಗರ್, ಕಿವಿ-ಮೂಗು-ಗಂಟಲು, ಎಲುಬು ಹಾಗೂ ಚರ್ಮ ಸಂಬಂಧಿತ ಪರೀಕ್ಷೆಗಳನ್ನು ಮಾಡಿಕೊಂಡು ಉಚಿತ ಔಷಧಿಗಳನ್ನು ಪಡೆದುಕೊಂಡರು.
ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಂಘಟನೆಯ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಯಿತು. ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ತೀರ್ಥ ಪ್ರಸಾದ್ ಎಂ ಸ್ವಾಗತಿಸಿದರು. ಅತಿಥಿಗಳನ್ನು ಪ್ರಕಾಶ್ ಮುಂಡಾಜೆ, ವಿಶ್ವನಾಥ ಶಾಲಾ ಬಳಿ ಹಾಗೂ ಸದಸ್ಯರಾದ ಲೋಹಿತ್ ಪಡೀಲ್, ಉದಿತ್ ಪಡೀಲ್, ಮಿಥುನ್ ಮುಂಡಾಜೆ, ನಿಹಲ್ ಪೆರ್ವೊಡಿ ಅವರು ಶಾಲು ಹಾಕಿ ಸನ್ಮಾನಿಸಿದರು.
ಈ ಶಿಬಿರವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಪ್ರೇರಣೆ ನೀಡಿದೆ.

Leave a Reply

Your email address will not be published. Required fields are marked *