ಕಡಬ: ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಕಡಬ ಪಟ್ಟಣ ಪಂಚಾಯತ್ ವತಿಯಿಂದ ರಾಜ್ಯ ನಗರಾಭಿವೃದ್ಧಿ ಸಚಿವರಾದ ಸುರೇಶ್ ಬಿ.ಎಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 200 ಕೋಟಿ ಮೊತ್ತದ ಯೋಜನೆಗಳ ಶಿಲಾನ್ಯಾಸ ಸಮಾರಂಭದ ಸಂದರ್ಭ ಸಚಿವರನ್ನು ಭೇಟಿ ಮಾಡಿದ ನಿಯೋಗವು, ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಅವರ ಗಮನಕ್ಕೆ ತಂದಿತು.





ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಮನ್ನಾ ಜಬೀನ್ ಅವರ ನೇತೃತ್ವದಲ್ಲಿ ಭೇಟಿ ನೀಡಿದ ನಿಯೋಗವು, ಕಡಬವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದು, ರಸ್ತೆ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಹಾಗೂ ಸಾರ್ವಜನಿಕ ಸ್ವಚ್ಛತೆಗಾಗಿ ತುರ್ತು ಕ್ರಮಗಳ ಅಗತ್ಯವಿದೆ ಎಂದು ಮನವಿ ಮಾಡಿತು.
ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್ ಪಿ.ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮನವಿಗೆ ಸ್ಪಂದಿಸುವಂತೆ ಸಚಿವರನ್ನು ವಿನಂತಿಸಿದರು.



