ನವದೆಹಲಿ: ಬೈಸರನ್ ವ್ಯಾಲಿಗೆ ಪ್ರವಾಸಕ್ಕೆಂದು ಹೋಗಿದ್ದಾಗ 26 ಜನರು ಸಾವನ್ನಪ್ಪಿದ್ದ ಭಯೋತ್ಪಾದಕ ದಾಳಿಗೆ ನಾಳೆ (ಏ.22) ಒಂದು ವರ್ಷ. ಈ ದುರಂತದ ದಿನದಂದು ಹಲವರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದು, ಭಾರತೀಯ ಸೇನೆ `ಆಪರೇಷನ್ ಸಿಂಧೂರ’ವನ್ನು (Operation Sindoor) ನೆನಪಿಸಿ, ಸಂದೇಶವೊಂದನ್ನು ನೀಡಿದೆ.

2025ರ ಏ.22 ಭಾರತಕ್ಕೆ ಕರಾಳ ದಿನ. ಪಹಲ್ಗಾಮ್‌ನಲ್ಲಿರುವ ಬೈಸರನ್ ವ್ಯಾಲಿಗೆ  ಪ್ರವಾಸಕ್ಕೆಂದು ತೆರಳಿದ್ದವರ ಪೈಕಿ 26 ಜನರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಭಾರತೀಯ ಸೇನೆ ಪಾಕ್‌ನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು. ಇದೀಗ ಭಾರತೀಯ ಸೇನೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಹಿಂದೂಗಳ ನರಮೇಧ ನಡೆಸಿದವರ ಜೀವ ತೆಗೆದುಕೊಂಡು ನ್ಯಾಯ ದೊರಕಿಸಿಕೊಟ್ಟಿದ್ದೇವೆ. ಭಾರತ ಒಗ್ಗಟ್ಟಾಗಿದೆ ಎಂದು ಬಲವಾದ ಸಂದೇಶ ನೀಡಿದೆ.

ಮಾನವೀಯತೆ ಮಿತಿಗಳನ್ನು ಮೀರಿದಾಗ ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ. ಕೆಲ ಮಿತಿಗಳನ್ನು ಮೀರಿದಾಗ ದೇಶ ಒಗ್ಗಟ್ಟಾಗಿ ನಿಲ್ಲುತ್ತದೆ. ಭಯೋತ್ಪಾದನೆಯ ಹಿಂದಿರುವವರಿಗೆ ಎಚ್ಚರಿಕೆ ನೀಡಿ, ನಾಗರಿಕರಿಗೆ ಬೆನ್ನೆಲುಬಾಗಿರುತ್ತದೆ ಎಂದು ಆಪರೇಷನ್ ಸಿಂಧೂರವನ್ನು ನೆನಪಿಸಿಕೊಂಡಿದೆ.

ಒಂದು ವರ್ಷದ ಹಿಂದೆ ನಡೆದ ಘಟನೆಯಿಂದಾಗಿ ಕುಟುಂಬಗಳು ಇಂದಿಗೂ ನೋವಿನಲ್ಲಿವೆ. ಗಾಯ ಮಾಸಿದರೂ ಅದರಿಂದಾದ ನೋವು ಇಂದಿಗೂ ದುಃಖ ನೀಡುತ್ತಿದೆ. ಇದೆಲ್ಲದರ ಜೊತೆಗೆ ಕೆಲ ಕುಟುಂಬಗಳು ತಮ್ಮ ಪ್ರೀತಿಪಾತ್ರರ ನೆನಪುಗಳನ್ನು ಜೀವಂತವಾಗಿಟ್ಟುಕೊಂಡು ಜೀವನವನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *