ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುರ್ತು ಚಿಕಿತ್ಸಾ ಘಟಕದ ಕೊರತೆ: ಆರೋಗ್ಯ ಸಚಿವರನ್ನು ಭೇಟಿಯಾದ ನಿಯೋಗ


ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಬರುವ ಸಾವಿರಾರು ಭಕ್ತರ ಮತ್ತು ಸ್ಥಳೀಯರ ದಶಕಗಳ ಕಾಲದ ಕನಸಾಗಿದ್ದ 24/7 ತುರ್ತು ಚಿಕಿತ್ಸಾ ಘಟಕ (Emergency Unit) ಶೀಘ್ರದಲ್ಲೇ ಸಾಕಾರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿನಿತ್ಯ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ, ಇಲ್ಲಿ ಸುಸಜ್ಜಿತ ತುರ್ತು ಚಿಕಿತ್ಸಾ ಘಟಕದ ಕೊರತೆಯಿಂದಾಗಿ, ಯಾರಿಗಾದರೂ ತೀವ್ರತರದ ಆರೋಗ್ಯ ಸಮಸ್ಯೆ ಎದುರಾದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಈ ಹಿಂದೆ ಹಲವು ಮರಣಗಳು ಸಂಭವಿಸಿವೆ. ಈ ಬಗ್ಗೆ ಸಾರ್ವಜನಿಕರು ಮತ್ತು ಭಕ್ತರು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.




ಈ ಗಂಭೀರ ಸಮಸ್ಯೆಯನ್ನು ಮನಗಂಡ ಸುಬ್ರಹ್ಮಣ್ಯದ ಪ್ರಮುಖರ ನಿಯೋಗವು ಏಪ್ರಿಲ್ 18ರಂದು ಮಂಗಳೂರಿನಲ್ಲಿ ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿತು. ಕ್ಷೇತ್ರದ ಅನಿವಾರ್ಯತೆ ಮತ್ತು ತುರ್ತು ಚಿಕಿತ್ಸಾ ಘಟಕದ ಅಗತ್ಯತೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ನಿಯೋಗವು, ಕೂಡಲೇ 24/7 ಘಟಕವನ್ನು ಆರಂಭಿಸುವಂತೆ ಒತ್ತಾಯಿಸಿತು.


