ಬೆಂಗಳೂರು, ಏಪ್ರಿಲ್ 24: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ ನಂತರ ವಂಚನೆ ಮಾಡಿದ ಆರೋಪ ಸಂಬಂಧ ಪುತ್ತೂರಿನ ಬಿಜೆಪಿ ಮಾಜಿ ಮುಖಂಡರ ಪುತ್ರ ಕೃಷ್ಣ ಜಿ. ರಾವ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ.
ಪ್ರಕರಣ ರದ್ದುಪಡಿಸುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಶರತ್ತಿನ ಮೇರೆಗೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ.
ಈ ವೇಳೆ, ಯುವತಿ ಹಾಗೂ 10 ತಿಂಗಳ ಮಗುವಿನ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಪ್ರತಿಮಾಸ ₹75,000 ಪಾವತಿಸಲು ನ್ಯಾಯಾಲಯ ಆರೋಪಿ ಕೃಷ್ಣ ಜಿ. ರಾವ್ ಅವರಿಗೆ ಸೂಚನೆ ನೀಡಿದೆ. ತಾಯಿ ಮತ್ತು ಮಗುವನ್ನು ಅನಾಥರನ್ನಾಗಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.






ಆರೋಪಿಯ ಪರ ವಕೀಲರು, ಇಬ್ಬರ ನಡುವೆ ಹಲವು ವರ್ಷಗಳ ಪ್ರೀತಿ ಇದ್ದು, ರಾಜಕೀಯ ವಿರೋಧದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಆರೋಪಿಯಿಂದಲೇ ಮಗು ಜನಿಸಿದ್ದ ಹಿನ್ನೆಲೆಯಲ್ಲಿ ತಂದೆಯಾಗಿರುವ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ತಿಳಿಸಿತು.
ಇದೇ ವೇಳೆ, ಮದುವೆಯಾಗುವುದು ಉತ್ತಮ ಪರಿಹಾರವಾಗಬಹುದು ಎಂಬ ಅಭಿಪ್ರಾಯವನ್ನು ಕೂಡ ನ್ಯಾಯಾಲಯ ವ್ಯಕ್ತಪಡಿಸಿತು



