ಅಕ್ಷಯ್ ಕಲ್ಲೇಗ
ಪುತ್ತೂರು: ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1ನೇ ಮತ್ತು 2ನೇ ಆರೋಪಿಯ ಜಾಮೀನು ಅರ್ಜಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕೃತಗೊಳಿಸಿ ಆದೇಶಿಸಿದೆ.


2023 ನ.6ರಂದು ನೆಹರುನಗರದಲ್ಲಿ ರಾತ್ರಿ ವೇಳೆ ಅಕ್ಷಯ್ ಕಲ್ಲೇಗ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಪಡೀಲು ನಿವಾಸಿ ಮನೀಶ್, ಕೃಷ್ಣನಗರದ ಚೇತನ್, ಬನ್ನೂರಿನ ಮಂಜುನಾಥ್ ಯಾನೆ ಹರಿ ಹಾಗೂ ಕೇಶವ ಪಡೀಲ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಕೆಲ ತಿಂಗಳ ಹಿಂದೆ ಕೊಲೆ ಪ್ರಕರಣದ 3ನೇ ಆರೋಪಿ ಮಂಜುನಾಥ್ ಶೆಣೈ ಮತ್ತು 4ನೇ ಆರೋಪಿ ಕೇಶವಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಕರಣದ 1ನೇ ಆರೋಪಿ ಮನೀಶ್ ಮತ್ತು 2ನೇ ಆರೋಪಿ ಚೇತನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕೃತಗೊಳಿಸಿದೆ.









