ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪಚ್ಚೆಮೊಗರು ಗ್ರಾಮದ ಭಾವದ ಬೈಲು ಎಂಬಲ್ಲಿ ದೈವದ ಬಂಡಾರ ಮೆರವಣಿಗೆ ವೇಳೆ ಕಾಲುಸಂಕ (ಸಣ್ಣ ಸೇತುವೆ) ಕುಸಿದು ಭಾರೀ ಅವಘಡ ಸಂಭವಿಸಿದೆ. ಈ ಘಟನೆದಲ್ಲಿ ಮುಕಲ್ದಿ ಸೇರಿದಂತೆ ಒಟ್ಟು 8 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.





ತಾಕೋಡೆ ಬರ್ಕೆ ಧರ್ಮನೆಮೊತ್ಸವದ ಅಂಗವಾಗಿ ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ನಡೆಸಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳ ನಡುವೆ ಭಕ್ತರು ಭಾವದ ಬೈಲು ಪ್ರದೇಶದ ಕಾಲುಸಂಕವನ್ನು ದಾಟುವ ಸಂದರ್ಭದಲ್ಲಿ ಏಕಾಏಕಿ ಸಂಕ ಮುರಿದುಬಿದ್ದಿದೆ. ಪರಿಣಾಮವಾಗಿ ಪಲ್ಲಕ್ಕಿ ಸಮೇತ ಭಂಡಾರ ಹೊತ್ತ ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಸಂಕದ ಭಾರಿ ಗಾತ್ರದ ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಪರಿಣಾಮ ಗಾಯಗಳ ತೀವ್ರತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳಲ್ಲಿ ಸುನಿಲ್ ಶೆಟ್ಟಿ (ಮುಕಲ್ದಿ) ಹಾಗೂ ಲೋಕೇಶ್ ಭಂಡಾರಿ ಸೇರಿದಂತೆ ಹಲವರು ಸೇರಿದ್ದಾರೆ.
ಈ ಅವಘಾತದಲ್ಲಿ ಪಲ್ಲಕ್ಕಿಯಲ್ಲಿದ್ದ ದೈವದ ಮುಖ ಮೂರ್ತಿಗಳು ಹಾಗೂ ಇತರೆ ಪವಿತ್ರ ಧಾರ್ಮಿಕ ಪರಿಕರಗಳಿಗೂ ಹಾನಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ನಂತರ ಸ್ಥಳೀಯರು ಹಾಗೂ ಅಧಿಕಾರಿಗಳು ತಕ್ಷಣ ರಕ್ಷಣೆ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



