ಉಪ್ಪಿನಂಗಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಸೋನಂದೂರು ಪ್ರದೇಶದಲ್ಲಿ 44 ವರ್ಷದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 57/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






ಕಾಣೆಯಾದ ವ್ಯಕ್ತಿಯನ್ನು ಜಗದೀಶ ಎಸ್.ಎಸ್. (44) ಎಂದು ಗುರುತಿಸಲಾಗಿದ್ದು, ಇವರು ಸೋಮಶೇಖರ ಎಸ್.ಕೆ. (69) ಅವರ ಪುತ್ರರಾಗಿದ್ದಾರೆ. ಜಗದೀಶ ಅವರು ಸೋನಂದೂರು ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರ ಪತ್ನಿ ಹಾಗೂ ಮಕ್ಕಳು ಹಾಸನದಲ್ಲಿ ವಾಸಿಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಜಗದೀಶ ಅವರು ಏಪ್ರಿಲ್ 6ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಮನೆಯಲ್ಲಿ ಇದ್ದರು. ನಂತರ ದಿನನಿತ್ಯದಂತೆ ತಂದೆಯ ಮನೆಗೆ ಚಹಕ್ಕಾಗಿ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅವರು ಕಾಣೆಯಾಗಿರುವುದು ತಿಳಿದುಬಂದಿದೆ. ವಿಶೇಷವೆಂದರೆ, ತಮ್ಮ ಮೊಬೈಲ್ ಫೋನ್ ಮತ್ತು ಬೈಕ್ ಅನ್ನು ಮನೆಯಲ್ಲಿ ಬಿಟ್ಟು ಅವರು ತೆರಳಿರುವುದು ಗಮನಾರ್ಹವಾಗಿದೆ.



ಈ ಹಿಂದೆ ಕೂಡ ಎರಡು-ಮೂರು ಬಾರಿ ಮನೆ ಬಿಟ್ಟು ತೆರಳಿ ಬಳಿಕ ವಾಪಸ್ ಬಂದಿದ್ದ ಹಿನ್ನೆಲೆ, ಈ ಬಾರಿ ಕೂಡ ಮರಳಿ ಬರುತ್ತಾರೆ ಎಂಬ ನಿರೀಕ್ಷೆಯಿಂದ ದೂರು ನೀಡಲು ತಡವಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕಾಣೆಯಾದ ವ್ಯಕ್ತಿ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

