ಕಡಬ, ಏ.26: 2012ರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಕಡಬ ಪೊಲೀಸರು ಆಂದ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
2012ರ ಜನವರಿ 31ರಂದು ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಅಮೈತಡ್ಕ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2012, ಐಪಿಸಿ ಕಲಂ 302, 201 R/W 34 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ತನಿಖಾಧಿಕಾರಿ ಎಂ.ಎನ್. ಅನುಚೇತ್ (ಐಪಿಎಸ್) ಅವರು ತನಿಖೆ ನಡೆಸಿ, ಸುಳ್ಯ ಅಜ್ಜವರ ನಿವಾಸಿ ಎನ್.ಎಂ. ಅಬ್ದುಲ್ ಅಜೀಜ್ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.2 ಲಕ್ಷ ದಂಡ ವಿಧಿಸಿತ್ತು. ಸರ್ಕಾರಿ ಅಭಿಯೋಜಕ ಕೆ.ಪಿ. ಯಶೋಧ ಅವರು ಪ್ರಕರಣದಲ್ಲಿ ವಾದ ಮಂಡಿಸಿದ್ದರು.
ಶಿಕ್ಷೆ ಪ್ರಕಟವಾದ ಬಳಿಕ ಆರೋಪಿಯು ತಲೆಮರೆಸಿಕೊಂಡಿದ್ದನು. ಇತ್ತೀಚೆಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ನೇತೃತ್ವದ ತಂಡ ಆಂದ್ರಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಬಂಧಿತನನ್ನು ಏ.25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *