ಪುತ್ತೂರು: ಈ ವರ್ಷದ ಜಾತ್ರೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ ಮತ್ತು ಹಿಂದಿನ ವರ್ಷಗಳಿಗಿಂತ ಹೆಚ್ಚು ಭಕ್ತರು ಭಾಗವಹಿಸಿರುವುದು ಜನಾಭಿಪ್ರಾಯದಲ್ಲಿಯೇ ಸ್ಪಷ್ಟವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರಿಗೆ ಯಾವುದೇ ನೂಕುನುಗ್ಗಲು ಆಗದಂತೆ ಸುಗಮ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.




ಜಾತ್ರೆಯ ಅಂಗವಾಗಿ ನಡೆದ ಪೇಟೆ ಸವಾರಿ, ರಥೋತ್ಸವ, ಪುಣ್ಯ ಸ್ನಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಅನ್ನಸಂತರ್ಪಣೆ, ಪ್ರಸಾದ ವಿತರಣೆ ಹಾಗೂ ದೇವಸ್ಥಾನದ ಒಳಹೊರಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.



ಈ ನಡುವೆ ಹಳೆಯ ಕಟ್ಟಡ ಕೆಡವಿದ ವಿಚಾರದಲ್ಲಿ ತಮ್ಮ ಮೇಲೆ ಬರುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಶಾಸಕ ರೈ, “ನಮಗೆ ರಿಯಲ್ ಎಸ್ಟೇಟ್ ಆಸಕ್ತಿ ಇಲ್ಲ. ಭಕ್ತರಿಗೆ ಉಳ್ಳಾಲ್ತಿ ಅಮ್ಮನವರು ಮತ್ತು ಮಹಾಲಿಂಗೇಶ್ವರ ದೇವರ ಭೇಟಿ ಸುಗಮವಾಗಬೇಕು ಎಂಬುದೇ ನಮ್ಮ ಉದ್ದೇಶ” ಎಂದು ಸ್ಪಷ್ಟಪಡಿಸಿದರು.
ಉಳ್ಳಾಲ್ತಿ ಅಮ್ಮನವರ ಭೇಟಿ ದಾರಿಗೆ ಹಿಂದಿನ ವರ್ಷಗಳಲ್ಲಿ ಕಿರಿದಾದ ದಾರಿ ಕಾರಣದಿಂದ ತೊಂದರೆ ಉಂಟಾಗಿದ್ದು, ಈ ಬಾರಿ ಸುಮಾರು 35 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಭಕ್ತರೇ ಕಟ್ಟಡ ತೆರವುಗೊಳಿಸಿದ್ದಾರೆ ಎಂದು ಹೇಳಿದರು. ಈ ಕುರಿತು ಕಾನೂನು ಪ್ರಕ್ರಿಯೆಗಳೂ ನಡೆಯುತ್ತಿದ್ದು, ನಗರಸಭೆ ಕಟ್ಟಡಗಳನ್ನು ಜಪ್ತಿ ಮಾಡಿರುವುದು ಹಾಗೂ ನ್ಯಾಯಾಲಯದಲ್ಲೂ ವಿಚಾರಣೆಯಿರುವುದನ್ನು ಅವರು ಉಲ್ಲೇಖಿಸಿದರು.
ಕೆಲವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹೊರಡುತ್ತಿರುವ ಆರೋಪಗಳು ಅಸತ್ಯವಾಗಿದ್ದು, ದೇವರ ಕಾರ್ಯದಲ್ಲಿ ತೊಡಗಿರುವುದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಅವರು ಮನವಿ ಮಾಡಿದರು.
ಇದಲ್ಲದೆ, ಉಳ್ಳಾಲ್ತಿ–ಮಹಾಲಿಂಗೇಶ್ವರ ಭೇಟಿ ಸ್ಥಳ ಅಭಿವೃದ್ಧಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಭಕ್ತರಿಂದ ಬೇಡಿಕೆಗಳು ಬಂದಿರುವುದಾಗಿ ಹೇಳಿದರು. ಜಾಗ ಮಾಲಕರು ಸಹಕಾರ ನೀಡಿದಲ್ಲಿ ದೇವಸ್ಥಾನಕ್ಕೆ ಜಾಗ ಹಸ್ತಾಂತರಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದರು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹352 ಕೋಟಿ ಯೋಜನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುಮೋದನೆ ಪಡೆಯಲಾಗುವುದು. ರಸ್ತೆ, ಪಿಂಡಪ್ರದಾನ ಸೌಲಭ್ಯ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯಗಳು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ದೇವಸ್ಥಾನದ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ಚರ್ಚಿಸಿ ಪರಿಹರಿಸಬೇಕು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಯನ್ನು ಹರಡಬಾರದು ಎಂದು ಅವರು ಮನವಿ ಮಾಡಿದರು.



