ಪುತ್ತೂರು: ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33 ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದಂತೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ತಡೆದಿವೆ ಎಂದು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಆರೋಪಿಸಿದರು.

ನಾರಿಶಕ್ತಿ ವಂದನ್ ಮಸೂದೆ ಸಂಸತ್ತಿನಲ್ಲಿ ಮಂಜೂರಾಗದೇ ಇರಲು ಕಾರಣವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸೋಮವಾರ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಧೋರಣೆಯಿಂದಾಗಿ ದೇಶದ ಮಹಿಳೆಯರು ಕೆರಳಿದ್ದಾರೆ. ನಾರಿಯ ಸಿಟ್ಟು ಕಾಂಗ್ರೆಸ್ ಪಾಲಿಗೆ ಮಾರಿಯಾಗಲಿದೆ ಎಂದವರು ಎಚ್ಚರಿಸಿದರು.

ಮುಖ್ಯ ಭಾಷಣ ಮಾಡಿದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಗೌರಿ ಮಾತನಾಡಿ, ಸಂಸತ್ತಿನಲ್ಲಿ ಮಹಿಳೆಗೆ ಮೀಸಲಾತಿಯನ್ನು ನಾವು ಭಿಕ್ಷೆಯಾಗಿ ಕೇಳುತ್ತಿಲ್ಲ. ಅದು ನಮ್ಮ ಹಕ್ಕು. ನ್ಯಾಯಯುತವಾಗಿ ಸಿಗಬೇಕಾದ ಗೌರವವಾಗಿದೆ. ಇವತ್ತು ಮಹಿಳೆ ಮೌನವಾಗಿ ಅನೇಕ ಸಾಧನೆಗಳನ್ನು ಮಾಡುತ್ತಿದ್ದಾಳೆ. ಇದನ್ನೆಲ್ಲ ಗಮನಿಸಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲು ಮುಂದಾದರು. ಅಧಿಕಾರಕ್ಕೆ ಬಂದಂದಿನಿಂದಲೂ ಮೋದಿಯವರು ಮಹಿಳೆಯರ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಕುತಂತ್ರದಿಂದಾಗಿ ಮಸೂದೆಗೆ ಸೋಲಾಯಿತು. ಆ ದಿನ ಕಾಂಗ್ರೆಸಿಗರು ಲಡ್ಡು ಹಂಚಿ ಸಂಭ್ರಮಿಸಿದ್ದಾರೆ ಎಂದರೆ ಕಾಂಗ್ರೆಸ್‍ನ ಮಾನಸಿಕತೆ ಏನೆಂಬುದು ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರ ಆಕ್ರೋಶ ಕಾಂಗ್ರೆಸ್ ಪಕ್ಷನ್ನು ಇನ್ನಿಲ್ಲದಂತೆ ಮಾಡಲಿದೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಕಲ್ಲಿಮಾರ್, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಆರ್. ಸಿ. ನಾರಾಯಣ್ ರೆಂಜ, ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಸಾಜ ರಾಧಾಕೃಷ್ಣ ಆಳ್ವ, ನಾಗೇಶ್ ಟಿ.ಎಸ್., ರಾಜೇಶ್ ಬನ್ನೂರು, ಪುರುಷೋತ್ತಮ ಗೌಡ ಮುಂಗ್ಲಿಮನೆ, ವಿರೂಪಾಕ್ಷ ಭಟ್, ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಹಿಳಾ ನಾಯಕಿಯರಾದ ಸ್ವರ್ಣಲತಾ ಹೆಗ್ಡೆ, ದೀಕ್ಷಾ ಪೈ,ಯಶೋಧಾ, ದಿವ್ಯಾ ಪುರುಷೋತ್ತ ಗೌಡ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, ವಸಂತಲಕ್ಷ್ಮೀ, ಜಯಲಕ್ಷ್ಮೀ ಶಗ್ರಿತ್ತಾಯ, ವಿಮಲಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *