ಕಡಬ, ನ.21:
ಬಜಕೆರೆ ಕಾಲೋನಿಯ ಸುತ್ತಮುತ್ತ ಕಳೆದ 8 ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳಿಂದ ಜನಜೀವನ ಆತಂಕಕ್ಕೆ ಒಳಗಾಗಿದ್ದು, ಅವುಗಳನ್ನು ತಕ್ಷಣವೇ ಸ್ಥಳಾಂತರಿಸಬೇಕು ಎಂಬ ಒತ್ತಾಯದೊಂದಿಗೆ ಇಲ್ಲದಿದ್ದರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ನಿವಾಸಿಗಳು ತೀರ್ಮಾನಿಸಿದ್ದರು.


ಇದರ ಹಿನ್ನೆಲೆಯಲ್ಲಿ ದಿನಾಂಕ 21.11.2025 ಶುಕ್ರವಾರ ಅಪರಾಹ್ನ 2.00 ಗಂಟೆಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಮುಂಚಿತವಾಗಿಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಕುರಿತು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಗೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಾಗೂ ಕಡಬ ತಹಶೀಲ್ದಾರರಿಗೆ ಲಿಖಿತ ಮನವಿ ಸಲ್ಲಿಸಲಾಗಿತ್ತು.
ಪ್ರತಿಭಟನೆಯ ಮುನ್ನವೇ ಇಂದು ಐತುರು ಗ್ರಾಮ ದ ಬಜಕೆರೆ ಕಾಲೋನಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸುಳ್ಯ ವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಕಾಲೋನಿಯ ನಿವಾಸಿಗಳೊಂದಿಗೆ ಕಾಡಾನೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.


ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, “ಇನ್ನೂ 2 ದಿನಗಳೊಳಗೆ ಈ ಭಾಗದಿಂದ ಕಾಡಾನೆಗಳನ್ನು ಸ್ಥಳಾಂತರಿಸಲಾಗುವುದು” ಎಂದು ಭರವಸೆ ನೀಡಿದರು. ಅರಣ್ಯ ಇಲಾಖೆಯ ಈ ಭರವಸೆಯನ್ನು ಗಮನಿಸಿ, ತಾತ್ಕಾಲಿಕವಾಗಿ ಪ್ರತಿಭಟನೆ ಮುಂದೂಡಲು ನಿವಾಸಿಗಳು ನಿರ್ಧರಿಸಿದ್ದು, ನಿಗದಿತ ಅವಧಿಯಲ್ಲಿ ಕ್ರಮ ಜರುಗದಿದ್ದಲ್ಲಿ ಮುಂದಿನ ಸೋಮವಾರ ಮತ್ತೊಮ್ಮೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವತ್ಸಲಾ, ಮಾಜಿ ಅಧ್ಯಕ್ಷ ಸತೀಶ್ ಕೆ., ಅಂಗನವಾಡಿ ಕಾರ್ಯಕರ್ತೆ ಲಿಂಗಮ್ಮ ಹಾಗೂ ಆಜನ ಕಲ್ಲಾಜೆ ಬಾಗದ ನಿವಾಸಿಗಳು ಉಪಸ್ಥಿತರಿದ್ದರು.



