ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ಮಾನವೀಯತೆಯನ್ನು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೆಣ್ಣು ಮಗು ಜನಿಸಿದ್ದಕ್ಕೆ ಕ್ರೂರ ತಾಯಿಯೇ ತನ್ನ ಮೂರು ದಿನದ ಹಸುಗೂಸಿನ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಅಶ್ವಿನಿ ಹಳೆಕಟ್ಟಿ ಎಂಬ ಮಹಿಳೆ ಕೊಲೆಗೈದ ಮಗುವಿನ ತಾಯಿ. ಘಟನೆ ಕುರಿತು ತಿಳಿದು ರಾಮದುರ್ಗ ಡಿವೈಎಸ್‌ಪಿ ಚಿದಂಬರ ಮಡಿವಾಳರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರೇಬಾನ ಪೊಲೀಸ್ ಠಾಣೆಯಲ್ಲಿ ತಾಯಿ ಅಶ್ವಿನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.




ಅಶ್ವಿನಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳು ಇದ್ದು, ಈ ಬಾರಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ನವೆಂಬರ್ 23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಜನ್ಮದ ಎರಡನೇ ದಿನ ತವರುಮನೆ ಹಿರೇಮುಲಂಗಿಗೆ ಬಂದ ಅಶ್ವಿನಿ, ಬೆಳಗ್ಗೆ ಮನೆಯಲ್ಲಿದ್ದಾಗ ಮಗು ಒಬ್ಬಡೆ ಇದ್ದ ಸಂದರ್ಭದಲ್ಲಿ ಕತ್ತು ಹಿಸುಕಿ ಹತ್ಯೆಗೈದಿದ್ದಾಳೆ.
ಬಳಿಕ ಮಗು ಉಸಿರಾಡುತ್ತಿಲ್ಲವೆಂದು ಕೃತಕ ನಾಟಕವಾಡಿದರೂ, ಮಗುವನ್ನು ತಕ್ಷಣ ರಾಮದುರ್ಗ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದರು. ಇದರಿಂದಲೇ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ನಂತರ ತಾಯಿಯೂ ಬಾಣಂತಿಯಾಗಿರುವುದರಿಂದ, ಅವರ ಆರೋಗ್ಯದ ಗಮನದಲ್ಲಿಟ್ಟು ಪೊಲೀಸರು ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ ಕಾವಲನ್ನೊದಗಿಸಿದ್ದಾರೆ.
ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ..



