ತುಮಕೂರು: ಕಾಂಗ್ರೆಸ್ ಧೋರಣೆಯಿಂದ ಬೇಸತ್ತು ಡಿ.ಕೆ.ಶಿವಕುಮಾರ್ ನಮಗೆ ಬಾಹ್ಯ ಬೆಂಬಲ ಕೊಟ್ಟರೆ ನಾವು ಸರ್ಕಾರ ರಚನೆ ಮಾಡಲು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಸದಾನಂದ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಾಹ್ಯ ಬೆಂಬಲದೊಂದಿಗೆ ನಮ್ಮವರು ಸಿಎಂ ಆಗಲು ನಮ್ಮ ಅಭ್ಯಂತರ ಇಲ್ಲ, ಆದರೆ ನಮ್ಮ ಬೆಂಬಲದೊಂದಿಗೆ ಡಿಕೆಶಿ ಸಿಎಂ ಆಗಬಹುದಾ ಅನ್ನೋದನ್ನು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯ ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಯತ್ತ ಜನರ ಒಲವಿದೆ. ಈ ವೇಳೆ ಹೈಕಮಾಂಡ್ ಡಿಕೆಶಿಗೆ ಸಪೋರ್ಟ್ ಮಾಡುವ ತಪ್ಪುವ ನಿರ್ಧಾರ ಕೈಗೊಳ್ಳಲ್ಲ ಅನ್ನೋದು ನನ್ನ ನಂಬಿಕೆ ಎಂದರು.

ಡಿಕೆಶಿ ಬಳಿ 70 ಜನ ಶಾಸಕರ ಬೆಂಬಲ ಇದ್ರೆ ಅವರ ಹೈಕಮಾಂಡೇ ಅವರನ್ನು ಸಿಎಂ ಮಾಡುತಿತ್ತು ಅಲ್ಲವೇ? ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಕುರಿತು ಕೇಂದ್ರ ಸಚಿವ ವಿ ಸೋಮಣ್ಣ ಕೊಟ್ಟಿರುವ ಹೇಳಿಕೆ ಸತ್ಯವಾಗಿರಬಹುದು. ಆದಾಗ್ಯೂ ಮಧ್ಯಂತರ ಚುನಾವಣೆ ಆಗೋದನ್ನು ನಾನು ವಿರೋಧಿಸುತ್ತೇನೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ 40% ಕಮಿಷನ್ ಆರೋಪ ಮಾಡಿ, ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದಿತ್ತು. ಈಗ ಇವರು 80% ಕಮಿಷನ್ ತೆಗೆದುಕೊಳ್ಳುತ್ತಾರೆ. ನಾವು ಅಧಿಕಾರಕ್ಕೆ ಬಂದರೆ ಇವರ 80% ಕಮಿಷನ್ ತನಿಖೆ ಮಾಡುತ್ತೇವೆ. ನಮ್ಮ ವಿರುದ್ಧ ತನಿಖೆ ಮಾಡಿದ ಇವರಿಗೆ ಸಾಬೀತು ಮಾಡಲು ಸಾಧ್ಯ ಆಗಿಲ್ಲ ಎಂದು ಟೀಕಿಸಿದರು.

Leave a Reply

Your email address will not be published. Required fields are marked *