ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ–ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ನವೆಂಬರ್ 25ರಂದು ಪಂಚಮಿ ಉತ್ಸವ ಭಕ್ತಿಭಾವದಿಂದ ನೆರವೇರಿತು. ಉತ್ಸವದ ಭಾಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಸೇವೆಗಳು ಹಾಗೂ ಪಲ್ಲಕ್ಕಿ ಉತ್ಸವ ವೈಭವೋಪೇತವಾಗಿ ಜರುಗಿದವು.

ಪಂಚಮಿ ಉತ್ಸವದಂದು ಬೆಳಿಗ್ಗೆ ಶ್ರೀ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಮತ್ತು ನಾಗತಂಬಿಲ ಸೇವೆಗಳು ನೆರವೇರಿದವು. ಬಳಿಕ ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆಯ ನಂತರ ಶ್ರೀ ದೇವರ ಬಲಿ, ಪಂಚಮಿ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವೈಭವದಿಂದ ನೆರವೇರಿತು. ಕಟ್ಟೆಪೂಜೆ ಹಾಗೂ ಶಿರಾಡಿ ದೈವದ ಕಿರುವಾಳು ಬರುವ ಸಂಪ್ರದಾಯಿಕ ವಿಧಿಯೂ ಜರುಗಿತು.

ಇದೇ ಸಂದರ್ಭದಲ್ಲಿ ಭಕ್ತರನ್ನು ಆಕರ್ಷಿಸಿದ ಸುಡುಮದ್ದು ಪ್ರದರ್ಶನವೂ ವಿಶೇಷ ಆಕರ್ಷಣೆಯಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಪ್ರಧಾನ ಅರ್ಚಕ ಕೆ. ವೆಂಕಟೇಶ್ ಭಟ್, ಸದಸ್ಯರು ಸೂರಪ್ಪ ಗೌಡ ಸಂಜಯನಗರ, ಮಹೇಶ್ ಬಿ. ಕಾವೇರಿಕಟ್ಟೆ, ರಕ್ಷಿತ್ ನಾಯ್ಕ ದರ್ಬೆ, ಲಲಿತಾ ಕೆ. ಕೆಮ್ಮಿಂಜೆ, ರೇಖಾ ಯಶೋಧರ ಮರೀಲು, ಚಂದ್ರಶೇಖರ ಕೆ. ಕಲ್ಲಗುಡ್ಡೆ, ವಸಂತ ನಾಯ್ಕ ಬೆದ್ರಾಳ, ಗುಮಾಸ್ತ ಭರತ್, ಸಿಬ್ಬಂದಿ ರಘುನಾಥ್ ಪೂಜಾರಿ ಸೇರಿದಂತೆ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *