ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಾರಥ್ಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನವೆಂಬರ್ 29 ಮತ್ತು 30ರಂದು ಜರುಗಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ನವೆಂಬರ್ 28ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಧಾರ್ಮಿಕ ವೈಭವದಿಂದ ನೆರವೇರಿತು.

ಈ ಬಾರಿ ವಿಶೇಷವಾಗಿ ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಮೂರೂ ದಿನಗಳ ನಿರಂತರ ಅನ್ನಸಂತರ್ಪಣೆಗೆ ಭಾರೀ ಪ್ರಮಾಣದಲ್ಲಿ ಹಸಿರುಹೊರೆ ಕಾಣಿಕೆ ಸಮರ್ಪಿಸಲಾಯಿತು.

ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಹೊರೆಕಾಣಿಕೆ ದರ್ಬೆಗೆ ಆಗಮಿಸಿತು. ಬಳಿಕ ಅಲ್ಲಿಂದ ಮೆರವಣಿಗೆ ಆರಂಭವಾಗಿ ಶ್ರೀ ಮಹಾಲಿಂಗೇಶ್ವರ ದೇವರಮಾರು ಗದ್ದೆಗೆ ಸಾಗಿತು. ದರ್ಬೆಯಲ್ಲಿ ತಂತ್ರಿವರ್ಯರು ಸುಬ್ರಹ್ಮಣ್ಯ ಬಳ್ಳಕುರಾಯ ಮತ್ತು ಕುಂಟಾರು ಗುರುತಂತ್ರಿಯವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪ್ರಧಾನ ಅರ್ಚಕರಾದ ವೇ.ಮೂ. ವಿ.ಎಸ್. ಭಟ್ ಅವರು ದೀಪ ಪ್ರಜ್ವಲನೆ ಮಾಡಿ ಉಗ್ರಾಹಣ ಮುಹೂರ್ತ ನೆರವೇರಿಸಿದರು. ಬಳಿಕ ಬ್ರಹ್ಮಶ್ರೀ ಗುರುತಂತ್ರಿಯವರು ಉಗ್ರಾಣ ವಿಧಿಯನ್ನು ನಡೆಸಿದರು.

ಸುಬ್ರಹ್ಮಣ್ಯ ಬಳ್ಳಕುರಾಯ ಮಾತನಾಡಿ,
“ದೂರದ ತಿರುಪತಿ ಶ್ರೀನಿವಾಸನ ದರ್ಶನವನ್ನು ನಮಗೆ ಹತ್ತಿರದಲ್ಲಿ ದೊರಕಿಸುತ್ತಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‍ನ ಸೇವಾಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ. ಅನ್ನಪ್ರಸಾದ ಸೇವೆಗೆ ಸಮರ್ಪಣಾಭಾವದೊಂದಿಗೆ ಕೈಜೋಡಿಸೋಣ,” ಎಂದು ಹೇಳಿದರು.

ಕುಂಟಾರು ಗುರುತಂತ್ರಿಯವರು, “ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವದಲ್ಲಿ ಎಲ್ಲರೂ ಸಹಭಾಗಿಯಾಗಬೇಕು. ಅರುಣ್ ಕುಮಾರ್ ಪುತ್ತಿಲ ಅವರಂತಹ ಧಾರ್ಮಿಕ ನಾಯಕರು ಕಾರ್ಯಕ್ರಮ ನಡೆಸುವಲ್ಲಿ ಬೆನ್ನೆಲುಬಾಗಿರುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಸಮಿತಿಯ ಗೌರವ ಸಲಹೆಗಾರ ಶಶಾಂಕ್ ಕೊಟೆಚಾ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *