ಪುತ್ತೂರು:ಪಾಣಾಜೆ ಗ್ರಾಮದ ನಿರೋಳ್ಯ ಎಂಬಲ್ಲಿ ಪರಿಶಿಷ್ಠ ಜಾತಿಗೆ ಸೇರಿದ 5 ಮನೆಗಳು ಸೇರಿದಂತೆ 7 ಕುಟುಂಬಗಳು ರಸ್ತೆ ಸಂಪರ್ಕ ಸಹಿತ ಮೂಲ ಸೌಕರ್ಯ ವಂಚಿತರಾಗಿದ್ದು, ರಸ್ತೆ ಮಾಡಲು ಸರ್ಕಾರಿ ಜಾಗ ಇದ್ದು, ಇದರಲ್ಲಿ ರಸ್ತೆ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ತಿಂಗಳ ಒಳಗಾಗಿ ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ಸ್ಥಳೀಯರನ್ನು ಸೇರಿಸಿಕೊಂಡು ಪ್ರತಿಭಟನಾ ರೀತಿಯಲ್ಲಿ ರಸ್ತೆ ನಿರ್ಮಿಸುವುದಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ಅಧ್ಯಕ್ಷ ಕೆ. ಗಿರಿಧರ್ ನಾಯ್ಕ್ ತಿಳಿಸಿದರು.

ಸೋಮವಾರ ಪುತ್ತೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಾಣಾಜೆ ಗ್ರಾಮದ ನೆರೋಳ್ಯದಲ್ಲಿ ಸುಮಾರು 97 ವರ್ಷಗಳ ಹಿಂದಿನಿಂದಲೇ ಕಾಲುದಾರಿ ಮಾತ್ರ ಇರುತ್ತದೆ. ಸದ್ರಿ ಮನೆಗಳಿಗೆ ಸಂಪರ್ಕ ರಸ್ತೆ ಇಲ್ಲವಾಗಿದ್ದು, ಅಂಗವಿಕಲರು ಮತ್ತು ಅನಾರೋಗ್ಯ ಪೀಡಿತ ಸಂದರ್ಭದಲ್ಲಿ ಹೊತ್ತುಕೊಂಡು ಹೋಗುವಂತ ಅನಿವಾರ್ಯತೆ ಉಂಟಾಗಿದ್ದು, ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗದೆ ಪ್ರಾಣವನ್ನು ಕಳೆದುಕೊಂಡ ಸ್ಥಿತಿ ಉಂಟಾಗಿದೆ.

ಈ ಕಾಲನಿಯ ಇತರ ಮನೆಗಳ ಜನರು ಕೃಷಿ ಉತ್ಪನ್ನಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯುತೆ ಹಾಗೂ ಪಡಿತರ ಮತ್ತು ದಿನಸಿ ಸಾಮಾಗ್ರಿ ತರಲು ಪ್ರಯಾಸ ಮಡಬೇಕಾಗಿದೆ. ಶಾಲಾ ಮಕ್ಕಳು ತೋಡು ದಾಟಿ ತೋಡಿನ ಬದಿಯಲ್ಲಿರುವ ಕಿರಿದಾದ ಅಡಿಕೆ ಮರದ ಪಾಲದಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಈ ಎಲ್ಲ ಸಂಕಷ್ಟವನ್ನು ಹಲವು ಬಾರಿ ತಿಳಿಸಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಿಳಿಸಿ, ಒಂದು ತಿಂಗಳ ಒಳಗಾಗಿ ಈ ಕಾಲನಿಯ ಜನರ ಸಮಸ್ಯೆಗೆ ಸ್ಪಂಧನೆ ದೊರಕದೆ ಇದ್ದಲ್ಲಿ ಸ್ಥಳೀಯರನ್ನು ಸೇರಿಸಿಕೊಂಡು ರಸ್ತೆ ನಿರ್ಮಿಸುವುದಾಗಿ ಎಚ್ಚರಿಕೆ ನೀಡಿದರು.

ನಮ್ಮ ಕಷ್ಟಗಳನ್ನು ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದ್ದೇವೆ. ಚುನಾವಣೆ ಬಂದಾಗ ಮತ ಕೇಳಲು ಬಂದವರು ರಸ್ತೆ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ಕೊಡುತ್ತಾರೆ. ಆದರೆ ಆ ಬಳಿಕ ಏನೂ ಆಗುವುದಿಲ್ಲ. ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ನಮಗೆ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ ಅವರೂ ನಮ್ಮ ಬೇಡಿಕೆ ಸ್ಪಂಧಿಸಿಲ್ಲ ಎಂದು ಕಾಲನಿ ನಿವಾಸಿ ಸುಮಿತ್ರಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲನಿ ನಿವಾಸಿ ಲಕ್ಷ್ಮಿ, ಸಂಘಟನೆಯ ನವೀನ್ ಮುಗೇರ, ಉದಯಕುಮಾರ್ ಎರ್ಕಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *