ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಳದಲ್ಲಿರುವ ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ–ಶಾರದಾಂಭ ಭಜನಾ ಮಂದಿರ ಹಾಗೂ ನಾಗಸಾನಿಧ್ಯದ 3ನೇ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮ ಡಿಸೆಂಬರ್ 7 ಮತ್ತು 8ರಂದು ಭಕ್ತಿಭಾವದಿಂದ ಜರುಗಲಿದೆ ಎಂದು ವಾರ್ಷಿಕೋತ್ಸವ ಸಮಿತಿಯ ಗೌರವ ಸಲಹೆಗಾರ ಡಾ. ಶ್ರೀಕುಮಾರ್ ಮತ್ತು ಅಧ್ಯಕ್ಷ ಜಯಾನಂದ ಕೋರಿಗದ್ದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಹಾಗೂ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಡಿಸೆಂಬರ್ 7ರಂದು ಬೆಳಿಗ್ಗೆ 5ಕ್ಕೆ ದೀಪಾರಾಧನೆ ಮತ್ತು ಶರಣುಘೋಷದೊಂದಿಗೆ ಉದ್ಘಾಟನೆ ನಡೆಯಲಿದೆ. ನಂತರ 6 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಸಂಜೆ 5ಕ್ಕೆ ಕುಣಿತ ಭಜನೆ, 6ಕ್ಕೆ ಶರಣುಘೋಷ, ನಂತರ ಸಂಜೆ 6.30ಕ್ಕೆ ಪಂಚಲಿಂಗೇಶ್ವರ ದೇವಳದಿಂದ ನೃತ್ಯಭಜಕರ ಕುಣಿತದೊಂದಿಗೆ ಭಜನಾ ಮಂದಿರದ ತನಕ ಉಲ್ಫೆ ಮೆರವಣಿಗೆ ನಡೆಯಲಿದೆ.




ಡಿಸೆಂಬರ್ 8ರಂದು ಬೆಳಿಗ್ಗೆ 5ಕ್ಕೆ ದೀಪಾರಾಧನೆ, ಶರಣುಘೋಷದ ಬಳಿಕ ನಾಗತಂಬಿಲ, ಭಜನಾ ಕಾರ್ಯಕ್ರಮ, ಬೆಳಿಗ್ಗೆ 10ಕ್ಕೆ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಮಹಾಪೂಜೆ-ಅನ್ನಸಂತರ್ಪಣೆ ಜರುಗಲಿದೆ.
ಅಪರಾಹ್ನ 2 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಯಾನಂದ ಕೋರಿಗದ್ದೆ ವಹಿಸಲಿದ್ದು, ಅತಿಥಿಗಳಾಗಿ ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ ಹಾಗೂ ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಯಂ ಭಾಗವಹಿಸಲಿದ್ದಾರೆ.
ಸಂಜೆ ಶಿವಪಂಚಾಕ್ಷರಿ ಯಕ್ಷಗಾನ ಪ್ರತಿಷ್ಠಾನ ಈಶ್ವರಮಂಗಳದ ಮಕ್ಕಳಿಂದ ಸುದರ್ಶನೋಪಾಖ್ಯಾನ ಯಕ್ಷಗಾನ ಪ್ರದರ್ಶನ, ನಂತರ ರಾತ್ರಿ ಮಹಾಪೂಜೆ–ಅನ್ನಸಂತರ್ಪಣೆ ಹಾಗೂ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಅಣ್ಣಯ್ಯ ಗೌಡ ಉರಿಕ್ಯಾಡಿ, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೆರ್ನಾಜೆ, ಸದಸ್ಯರಾದ ಮೇನಾಲ ಪ್ರವೀಣ್ ರೈ ಮತ್ತು ಬಾಲಕೃಷ್ಣ ಪಾಟಾಳಿ ಉಪಸ್ಥಿತರಿದ್ದರು.



