ಕಡಬ: ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎನ್ನುವ ಗಾದೆಯನ್ನು ನೆನಪಿಸುವಂತ ಘಟನೆ ಕಡಬದ ಕೊಯಿಲದಲ್ಲಿ ನಡೆದಿದೆ. ಜನರ ರಕ್ಷಣೆಗೆ ಖಾಕಿ ಧರಿಸಿದ ಪೊಲೀಸ್ ಸಿಬ್ಬಂದಿಯೇ ತಡರಾತ್ರಿ ಮನೆಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಕೃತ್ಯ ಎಸಗಿದ ಆರೋಪಿ ಮತ್ತಾರೂ ಅಲ್ಲ, ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಜು ನಾಯ್ಕ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಡಿಸೆಂಬರ್ 03ರ ತಡರಾತ್ರಿ ಈ ಘಟನೆ ನಡೆದಿದೆ. ಕೊಯಿಲ ನಿವಾಸಿ ಬಾಬು ಗೌಡ (53) ಅವರ ಸಹೋದರ ಹರೀಶ ಅವರ ಮನೆಯಲ್ಲಿ ಏಕಾಏಕಿ ಜೋರಾದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಬಾಬು ಗೌಡ ಸ್ಥಳಕ್ಕೆ ಧಾವಿಸಿದರು. ಅಲ್ಲಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದ ಅಪರಿಚಿತ ವ್ಯಕ್ತಿಯನ್ನು ಮನೆಯವರು ಹಿಡಿದಿಟ್ಟಿರುವುದು ಅವರಿಗೆ ಗೋಚರಿಸಿತು.




ಹಿಡಿದಿಟ್ಟ ಸಂದರ್ಭದಲ್ಲಿ ಆ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಮನೆಯ ಸದಸ್ಯ ಚೇತನ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ, ಆತ ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಜು ನಾಯ್ಕ ಎಂಬುದು ಬಹಿರಂಗವಾಗಿದೆ. ಕಾನೂನು ಕಾಯುವವನೇ ಕಾನೂನು ಉಲ್ಲಂಘಿಸಿದ್ದರಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮನೆಯೊಳಗೆ ಅಕ್ರಮ ಪ್ರವೇಶ ಹಾಗೂ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅಕ್ರ.86/2025 ರಂತೆ ಭಾರತೀಯ ನ್ಯಾಯ ಸಂಹಿತೆ (BNS 2023) ಧಾರಾ 329(3), 115(2), 331(6) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ಹೆಡ್ ಕಾನ್ಸ್ಟೇಬಲ್ ರಾಜು ನಾಯ್ಕರನ್ನು ತಕ್ಷಣದಿಂದ ಅಮಾನತು ಮಾಡಿದ್ದು, ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.



