ಪುತ್ತೂರು: ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ನಿಯಂತ್ರಣ ಮಸೂದೆ–2025 ಹಾಗೂ ಗೋಹತ್ಯಾ ನಿಷೇಧ ಕಾನೂನಿನಲ್ಲಿ ಸಡಿಲಿಕೆ ತರಲಿರುವ ತಿದ್ದುಪಡಿ ಕುರಿತು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೂದೆಗಳನ್ನು ತಕ್ಷಣ ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ಸಿನ ನೇತೃತ್ವದ ಕರ್ನಾಟಕ ಸರ್ಕಾರ ಮತ್ತೊಮ್ಮೆ “ಹಿಂದೂ ವಿರೋಧಿ ನಿಲುವು” ಪ್ರದರ್ಶಿಸಿರುವುದಾಗಿ ಆರೋಪಿಸಿರುವ ಅವರು, ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತಪಡೆಯುವ ರಾಜಕೀಯ ಲೆಕ್ಕಾಚಾರವೇ ಇತ್ತೀಚಿನ ಕ್ರಮಗಳ ಹಿಂದೆ ಇದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಅಕ್ರಮ ಗೋಸಾಗಾಟ ತಡೆಯಲು ಜಾರಿಗೆ ಬಂದಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ–2020ರಲ್ಲಿ ತಿದ್ದುಪಡಿ ತರಲು ಯತ್ನಿಸುತ್ತಿರುವುದು, ಪರೋಕ್ಷವಾಗಿ ಗೋ ಹತ್ಯೆಗೆ ಬೆಂಬಲ ನೀಡುವಂತಿದೆ ಎಂದು ಹೇಳಿದರು.




ತಿದ್ದುಪಡಿ ಜಾರಿಯಾದರೆ ಅಕ್ರಮ ಗೋಸಾಗಾಟ ಪತ್ತೆಯಾದರೂ ಶಿಕ್ಷೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳು ಆರೋಪಿಗಳಿಗೆ ಸುಲಭವಾಗಿ ಮರಳಿ ಸಿಗುವಂತಾಗುವುದು, ಇದರಿಂದ ಅಕ್ರಮ ಚಟುವಟಿಕೆಗಳು ಮತ್ತಷ್ಟು ಬಲ ಪಡೆಯುವ ಆತಂಕವಿದೆ ಎಂದು ಅರುಣ್ ಕುಮಾರ್ ಪುತ್ತಿಲ ಆರೋಪಿಸಿದರು.
ಇದಲ್ಲದೆ, ಸರ್ಕಾರದ ಈ ನಿಲುವಿನಿಂದ ರಾಜ್ಯದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಭೀತಿ ಉಂಟಾಗಿದೆ. ಮಸೂದೆಗಳನ್ನು ಸಚಿವ ಸಂಪುಟ ಅನುಮೋದಿಸಿದರೂ, “ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬರುತ್ತಿರುವ ರಾಜಕಾರಣಿಗಳು ಮೌನ ವಹಿಸಿರುವುದು ವಿಷಾದನೀಯ” ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ರಾಜಧರ್ಮ ಪಾಲಿಸಿ ಮಸೂದೆಯನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.



