ತುಳು ರಂಗಭೂಮಿಯಲ್ಲಿ ಮೊದಲ ಬಾರಿಗೆ ಕ್ಷುದ್ರ ಶಕ್ತಿಯ ಆಧಾರಿತ ಭಯಾನಕ ಕಥೆಯನ್ನು ಹೊಂದಿದ ‘ಬ್ರಹ್ಮರಕ್ಕಸ’ ಎಂಬ ವಿನೂತನ ನಾಟಕ ಮಂಗಲೂರಿನ ವೇದಿಕೆ ಮೇಲೆ ಪ್ರದರ್ಶನಗೊಳ್ಳುತ್ತಿದೆ. ತ್ರಿನೇತ್ರ ಕಲಾವಿದರು ಕುಡ್ಲ ಅವರಿಂದ ಅಭಿನಯಿಸಲ್ಪಡುವ ಈ ನಾಟಕ ಪ್ರೇಕ್ಷಕರ ಮನರಂಜನೆಗೆ ಹೊಸ ಅನುಭವವನ್ನು ನೀಡಲಿದೆ.
ಅದ್ಧೂರಿ ರಂಗ ವಿನ್ಯಾಸ, ಎಲ್ಇಡಿ ಹೊಸ ತಂತ್ರಜ್ಞಾನವನ್ನು ಬಳಸಿ ಸಿದ್ಧವಾಗುತ್ತಿರುವ ಈ ತುಳು ನಾಟಕ ಡಿಸೆಂಬರ್ 10, ಬುಧವಾರ ಸಂಜೆ 6 ಗಂಟೆಗೆ ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ.


ನಾಟಕಕ್ಕೆ ನರೇಶ್ ಕುಮಾರ್ ಸಸಿಹಿತ್ಲು ಕಥೆ, ಸಂಭಾಷಣೆ, ಸಾಹಿತ್ಯ, ಪರಿಕಲ್ಪನೆ ಹಾಗೂ ನಿರ್ದೇಶನ ಒದಗಿಸಿದ್ದು, ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು ಸಾರಥ್ಯ ವಹಿಸಿದ್ದಾರೆ. ಶೈಲೇಶ್ ಸಸಿಹಿತ್ಲು ನಿರ್ಮಾಣ ಮಾಡಿದ್ದು, ನಿರ್ಮಾಣ–ನಿರ್ವಹಣೆಯನ್ನು ಸಂಜಿತ್ ಚಿತ್ರಪುರ ನೋಡಿಕೊಂಡಿದ್ದಾರೆ.
ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಈ ಭಯಾನಕ ಕಥಾನಕದ ನಾಟಕಕ್ಕೆ ಈಗಾಗಲೇ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.





