ಮಂಗಳೂರು: ಸನಾತನ ನಾಟ್ಯಾಲಯ ಮಂಗಳೂರು ಮತ್ತು ನೃತ್ಯಂಗನ್ ಮಂಗಳೂರು ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ನಾಲ್ಕನೇ ವರ್ಷದ “ನೃತ್ಯ ವಾಹಿನಿ” ಕಾರ್ಯಕ್ರಮವು ವಿವಿಧ ನೃತ್ಯಪ್ರದರ್ಶನಗಳ ಹೂವಿನ ಹರಿವಿನಂತೆ ಕಲಾಪ್ರೇಕ್ಷಕರನ್ನು ಮನಸೂರೆಗೊಂಡಿತು. ಉತ್ತಮ ಸಂಘಟನೆ ಮತ್ತು ಕಲಾಮೆಚ್ಚಿದ ಪ್ರೇಕ್ಷಕರ ಸಾನ್ನಿಧ್ಯದಿಂದ ಕಾರ್ಯಕ್ರಮ ಮತ್ತಷ್ಟು ಮೆರಗು ಪಡೆದು ಯಶಸ್ವಿಯಾಯಿತು.
ಈ ಬಾರಿ ಮೂರು ವಿಶೇಷ ನೃತ್ಯ ಪ್ರಯೋಗಗಳು ವೇದಿಕೆಯನ್ನು ಅಲಂಕರಿಸಿದವು.

ಮೊದಲ ಪ್ರದರ್ಶನದಲ್ಲಿ ಯುವ ಕಲಾವಿದೆ ಅನಘಾ ಜಿ.ಎಸ್ ತಮ್ಮ ನಿಖರವಾದ ಹೆಜ್ಜೆಗಳು, ಚೆಲುವಾದ ಅಂಗಸೂಚನೆಗಳು ಮತ್ತು ಸಂವೇದನಾಶೀಲ ಅಭಿನಯದ ಮೂಲಕ ಕಾರ್ಯಕ್ರಮಕ್ಕೆ ಸೊಗಸಾದ ಚಾಲನೆ ನೀಡಿದರು.
ಮುಂದಿನ ಪ್ರದರ್ಶನವಾಗಿ ‘ಪೂನತ’ ಎನ್ನುವ ರಂಗರೂಪಾತ್ಮಕ ನೃತ್ಯಪ್ರಯೋಗವನ್ನು ಪುಣೆಯ ಸ್ವರದ ಭಾವೆ ಮತ್ತು ಈಶ ಪಿಂಗ್ಲೆ ಜೋಡಿ ಮಂಡಿಸಿದರು. ದೇಹಭಾಷೆ, ರಂಗಭೂಮಿಯ ಚಲನೆಗಳು ಮತ್ತು ಭರತನಾಟ್ಯದ ಜತಿಗಳನ್ನು ಸಮನ್ವಯಗೊಳಿಸಿ ರಾಕ್ಷಸಿ ಪೂನತಿಯ ಕಥೆಯನ್ನು ಬಿಂಬಿಸಿದ ಈ ಪ್ರಯೋಗ ಕಲಾಭಿಮಾನಿಗಳ ಮನಸ್ಸಿನಲ್ಲಿ ಆಳವಾದ ಮುದ್ರೆಯನ್ನು ಮೂಡಿಸಿತು. ಪೂನತಿಯ ಅಂತ್ಯವನ್ನು ನೃತ್ಯರೂಪದಲ್ಲಿ ತೋರಿಸಿದ ವಿಧಾನ ಪ್ರೇಕ್ಷಕರಲ್ಲಿ ಕನಿಕರವನ್ನೂ ಜಾಗೃತಗೊಳಿಸಿತು.




ಕೊನೆಯಾಗಿ ‘ರಾಮ’ ಎಂಬ ರೂಪಕವನ್ನು ಸೃಷ್ಟಿ ಫೌಂಡೇಶನ್‌ನ ಡಾ. ಮಂಜರಿ ಚಂದ್ರ ಪುಷ್ಪರಾಜ್ ಹಾಗೂ ತಂಡ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಮಹಾಕವಿ ಸಾತ್ವಿ ತಿರುವನಾಳರ “ಭಾವ ಯಾಮಿ ರಘುರಾಮ” ಕೃತಿಯನ್ನು ಆಧಾರವಾಗಿಸಿಕೊಂಡ ಈ ನೃತ್ಯರೂಪದಲ್ಲಿ ಬಾಲಕಾಂಡದಿಂದ ಯುದ್ಧಕಾಂಡದವರೆಗಿನ ರಾಮಾಯಣದ ಪ್ರಸಂಗಗಳನ್ನು ಅದ್ಭುತವಾಗಿ ಮಿಂಚಿಸಿದರು.


ಕಥೆಯ ನಿರೂಪಣೆ, ಶುರುವಿನಿಂದ ಕೊನೆಯ ತನಕ ಎಲ್ಲಾ ಕಲಾವಿದರ ಚುರುಕಿನ ನಡೆ ಅಲ್ಲದೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ನೃತ್ಯರೂಪಕದ ಚೆಂದವಾದ ಪ್ರದರ್ಶನಕ್ಕೇ ಕಾರಣವಾಯಿತು. ಬಾಲಕೃಷ್ಣ ಕೊಡವೂರು ಅವರ ಬೆಳಕಿನ ವಿನ್ಯಾಸವೂ ಪೂರಕವಾಗಿತ್ತು ಎನ್ನಬಹುದು. ಒಟ್ಟಿನಲ್ಲಿ ನೃತ್ಯವಾಹಿನಿ ಒಂದು ಸುಂದರವಾದ ನೃತ್ಯಪ್ರಸ್ರುತಿಗಳಗೊಂಚಲಾಗಿ ನೋಡುಗರಿಗೆ ಮುದನೀಡಿದುದಂತು ಸತ್ಯ. ಈ ಕಾರಣಕ್ಕೇ ಕಾರ್ಯಕ್ರಮದ ಆಯೋಜನೆಗಾಗಿ ಶ್ರಮಿಸಿದ ಸನಾನತ ನಾಟ್ಯಾಲಯದ ವಿದುಷಿ ಶ್ರೀಲತಾ ನಾಗರಾಜ್ ಹಾಗೂ ನೃತ್ಯಾಂಗನ್ ಸಂಸ್ಥೆಯ ರಾಧಿಕಾ ಶೆಟ್ಟಿ ಅಭಿನಂದನಾರ್ಹರು.
ನೃತ್ಯಪ್ರಯೋಗಗಳ ವೈವಿಧ್ಯ, ಕಲಾವಿದರ ಕೌಶಲ್ಯ ಮತ್ತು ರಂಗಸೃಷ್ಟಿಯ ನವೀನತೆಗಳಿಂದ “ನೃತ್ಯ ವಾಹಿನಿ” ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

