ಕಡಬ: ರಾಜ್ಯ ಸರ್ಕಾರ ಗೋಹತ್ಯಾ ನಿಷೇಧ ಕಾನೂನಿಗೆ ತಿದ್ದುಪಡಿ ತರಲು ಯತ್ನಿಸುತ್ತಿರುವ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡದ ನೇತೃತ್ವದಲ್ಲಿ ಮಂಗಳವಾರ ಸಂಜೆ ತೀವ್ರ ಪ್ರತಿಭಟನೆ ಜರುಗಿತು. ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, “ಗೋಹಂತಕರಿಗೆ ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಿ ರಾಜ್ಯದಲ್ಲಿ ಅಶಾಂತಿ ಸೃಷ್ಠಿಸಬೇಡಿ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬಸವರಾಜ ಬೊಮ್ಮಾಯಿ ಸರ್ಕಾರ ಜಾರಿಗೆ ತಂದ ಗೋಹತ್ಯಾ ನಿಷೇಧ ಕಾನೂನಿನಿಂದ ರಾಜ್ಯದಲ್ಲಿ ಗೊಂದಲ ಕಡಿಮೆಯಾಗಿದ್ದರೂ, ಈಗಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಒಲವಿಗಾಗಿ ಕಾನೂನು ದುರ್ಬಲಗೊಳಿಸಲು ಹೊರಟಿದೆ ಎಂದು ಅವರು ಆರೋಪಿಸಿದರು. “ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಸರ್ಕಾರ ಮಾಡುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದಕ್ಕೆ ಮೌನವಾಗಿದ್ದಾರೆ,” ಎಂದು ಶೆಟ್ಟಿ ಹೇಳಿದರು.

ನಿವೃತ್ತ ಅರಣ್ಯಾಧಿಕಾರಿ ಸದಾಶಿವ ಭಟ್ ಮತ್ತು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಲಸ್ತ್ಯ ರೈ ಕೂಡಾ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿ, “ಕಾನೂನು ತಿದ್ದಿದರೆ ಹೋರಾಟ ತಿವ್ರಗೊಳ್ಳುತ್ತದೆ; ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿರುತ್ತದೆ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿಹಿಂಪ ಗೌರವಾಧ್ಯಕ್ಷ ಕಡ್ಯ ವಾಸುದೇವ ಭಟ್, ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಬಜರಂಗ ದಳ ಸಂಯೋಜಕ ಅಶ್ವಿತ್ ಕಂಡಿಗ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಸುಕೇಶ್‌ಕುಮಾರ್ ಹಳೆಸ್ಟೇಶನ್ ಸ್ವಾಗತಿಸಿ ನಿರೂಪಿಸಿದ್ದು, ಜಯಂತ ಕಲ್ಲುಗುಡ್ಡೆ ವಂದಿಸಿದರು.

Leave a Reply

Your email address will not be published. Required fields are marked *