ಮಂಗಳೂರು: ಕಾಂತಾರ ಚಿತ್ರದ ಯಶಸ್ಸಿನ ಬಳಿಕ ದೈವಾರಾಧನೆಗೆ ಹೊಸ ಚರ್ಚೆಗೆ ಕಾರಣರಾಗಿರುವ ನಟ–ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ವಿವಾದದ ಕೇಂದ್ರವಾಗಿದ್ದಾರೆ. ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ–ನೇಮ ಕಾರ್ಯಕ್ರಮದ ವೇಳೆ ದೈವಾರ್ಥಕನ ವರ್ತನೆ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ವಾರದ ಹಿಂದೆ ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವಕ್ಕೆ ಕಾಂತಾರ ಚಿತ್ರದ ತಂಡವೊಂದು ಹರಕೆ, ನೇಮ ಅರ್ಪಿಸಿತ್ತು. ಈ ಸಂದರ್ಭದಲ್ಲಿ ದೈವದ ಪಾತ್ರಧಾರಿ ರಿಷಬ್ ಶೆಟ್ಟಿಯನ್ನು ಹಾರೈಸಿದ ರೀತಿ, ತೊಡೆಯ ಮೇಲೆ ಮಲಗಿದಂತೆ ಕಾಣುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹಲವು ಟೀಕೆ–ಟಿಪ್ಪಣಿಗಳಿಗೆ ಕಾರಣವಾಗಿವೆ.

ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಎದುರಿಸಿದ ತೊಂದರೆಗಳ ಹಿನ್ನೆಲೆಯಲ್ಲಿ ಹರಕೆ ಸಲ್ಲಿಸುವುದಾಗಿ ರಿಷಬ್ ಶೆಟ್ಟಿ ದಂಪತಿ ಹೇಳಿಕೊಂಡಿದ್ದರು. ಅದನুসರಿಸಿ ಚಿತ್ರ ಬಿಡುಗಡೆಗೊಂಡು ಭಾರೀ ಯಶಸ್ಸು ಗಳಿಸಿದ ನಂತರ, ಇಡೀ ತಂಡವೇ ಬಾರೆಬೈಲ್ ದೈವಸ್ಥಾನಕ್ಕೆ ಆಗಮಿಸಿ ಹರಕೆ, ನೇಮ ನೆರವೇರಿಸಿತು.

ಆದರೆ, ಈ ಕಾರ್ಯಕ್ರಮದಲ್ಲಿ ದೈವಾರ್ಥಕನ ಅತಿರೇಕದ ವರ್ತನೆಯೇ ಟೀಕೆಗೆ ಗ್ರಾಸವಾಗಿದೆ. “ಇದು ದೈವದ ನೇಮವಲ್ಲ, ಹೊಸದಾಗಿ ಮಾಡುತ್ತಿರುವ ಪ್ರದರ್ಶನ” ಎಂದು ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, “ಹರಕೆ ಸಂಪ್ರದಾಯದ ಹೆಸರಿನಲ್ಲಿ ಅತಿರೇಕ ಬೇಡ” ಎಂದು ಇನ್ನೂ ಕೆಲವು ಪ್ರತಿಕ್ರಿಯಿಸಿದ್ದಾರೆ.

ಈ ವೇಳೆ, ದೈವದ ಪಾತ್ರಧಾರಿಯಾಗಿದ್ದ ಮುಕೇಶ್ ಗಂಧಕಾಡು ಅವರು ನಟ ರಿಷಬ್ ಶೆಟ್ಟಿ ಕುಳಿತುಕೊಂಡಿದ್ದ ಜಾಗಕ್ಕೆ ತೆರಳಿ ತೊಡೆಯಲ್ಲಿ ಮಲಗಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು, ದೈವಾರಾಧಕರು ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೈವದ ಸಹಜ ವೇಷವಿಲ್ಲದೆ ಸೊಂಟಕ್ಕೆ ಕೆಂಪು ಬಟ್ಟೆ ಮತ್ತು ಬರಿ ಮೈಯಲ್ಲಿ ನರ್ತಿಸುತ್ತ ಪಲ್ಟಿ ಹೊಡೆದಿರುವುದೂ ಸರಿಯಲ್ಲ ಎಂದು ದೈವ ನರ್ತಕನ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ದೈವಾರಾಧಕ ತಮ್ಮಣ್ಣ ಶೆಟ್ಟಿ, ರಿಷಬ್ ಶೆಟ್ಟಿ ಕುಂದಾಪುರದವರಾಗಿದ್ದು ತುಳುನಾಡಿನ ದೈವಾರಾಧನೆ ಬಗ್ಗೆ ತಿಳಿದಿರಲಿಕ್ಕಿಲ್ಲ. ಆದರೆ ದೈವದ ಆರಾಧನೆ ಮಾಡುವವರು ಈ ರೀತಿ ತಪ್ಪು ಮಾಡಬಾರದಿತ್ತು. ರಾಜನ್ ದೈವ ಪಂಜುರ್ಲಿ ಹೇಗಿರಬೇಕೋ ಹಾಗೆಯೇ ಇರಬೇಕು, ಬರಿಮೈಯಲ್ಲಿ ನರ್ತಿಸುವುದು, ಪಲ್ಟಿ ಹೊಡೆಯುವುದೆಲ್ಲ ಪಂಜುರ್ಲಿ ಕೋಲದಲ್ಲಿ ಇಲ್ಲ. ದೈವಾರಾಧನೆ ಕರಾವಳಿ ಜನರ ಆರಾಧನಾ ಕಲೆಯಾಗಿದ್ದು, ಇದನ್ನು ಮಾರ್ಕೆಟ್ ಮಾಡಬೇಕಿಲ್ಲ. ಅದರ ನೆಪದಲ್ಲಿ ರಿಷಬ್ ಶೆಟ್ಟಿ ಬಿಸಿನೆಸ್ ಮಾಡುವುದೂ ಬೇಕಿಲ್ಲ.

ಇದಲ್ಲದೆ, ರಾಜನ್ ದೈವಗಳಿಗೆ ಹರಕೆ ನೇಮ ಎನ್ನುವುದೇ ಇಲ್ಲ. ರಿಷಬ್ ಶೆಟ್ಟಿ ಹೆಸರಲ್ಲಿ ಹರಕೆ ನೇಮ ಮಾಡಿದ್ದೇ ತಪ್ಪು. ಇದಕ್ಕೆಲ್ಲ ದೈವವೇ ಉತ್ತರ ನೀಡಬೇಕು. ರಾಜನ್ ದೈವಗಳಿಗೆ ವಾರ್ಷಿಕ ಉತ್ಸವ ಬಿಟ್ಟರೆ ಗುತ್ತಿನವರು ಧರ್ಮನೇಮ ಎಂದಷ್ಟೇ ಮಾಡುವುದು ವಾಡಿಕೆ. ಇನ್ಯಾರೋ ಬಂದು ಹರಕೆ ನೇಮ ಮಾಡುವ ಸಂಪ್ರದಾಯ ಇಲ್ಲ. ರಿಷಬ್ ಶೆಟ್ಟಿ ಬೇಕಾದರೆ ತನ್ನ ಮನೆಯಲ್ಲಿ ದೈವಾರಾಧನೆ ಇದ್ದರೆ ಅವುಗಳಿಗೆ ಕೋಲ ಕೊಟ್ಟು ಹರಕೆ ತೀರಿಸಲಿ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ.

ಜಾಲತಾಣದಲ್ಲಿ ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ವರ್ತನೆ ಬಗ್ಗೆ ಭಾರೀ ಟೀಕೆ ಕೇಳಿಬಂದಿದ್ದು, ಅದು ದೈವ ಮಲಗಿದ್ದಲ್ಲ, ದೈವ ನರ್ತಕ ಎಂದು ಟೀಕಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಇದು ದೈವ ಆಡಿದ್ದೋ, ದೈವ ನರ್ತಕನ ಮಾತಾಡಿದ್ದೋ ಎನ್ನುವ ರೀತಿಯ ಡೈಲಾಗ್ ಇತ್ತು. ಅದೇ ರೀತಿಯಲ್ಲಿ ಇದು ದೈವ ನರ್ತಕನ ಕಿತಾಪತಿ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ದೈವಾರಾಧಕರು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *