ಬೆಳಗಾವಿ, ಡಿ.11:
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ, ಮನೆಕಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಕುರಿತು ಗೃಹಸಚಿವರನ್ನು ತೀವ್ರವಾಗಿ ಪ್ರಶ್ನಿಸಿದರು. ಗೃಹಸಚಿವರು ನೀಡಿದ ಅಂಕಿಅಂಶಗಳು ಕಾನೂನು–ಸುವ್ಯವಸ್ಥೆಯ ಸ್ಥಿತಿ ಗಂಭೀರವಾಗಿದೆ ಎಂಬುದನ್ನು ತೋರಿಸಿವೆ.
ಶಾಸಕರು ನೀಡಿದ್ದಾರೆಂಬ ಮಾಹಿತಿಯ ಪ್ರಕಾರ,
- 2023ರಲ್ಲಿ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 28 ಸಾವಿರ ಇನ್ನೂ ಪತ್ತೆಯಾಗಿಲ್ಲ.
- 2024ರಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 23 ಸಾವಿರ ಪತ್ತೆಯಾಗಿಲ್ಲ.
- 2025ರಲ್ಲಿ ಈಗಾಗಲೇ 30 ಸಾವಿರ ಪ್ರಕರಣಗಳು ದಾಖಲಾಗಿದ್ದು, 8 ಸಾವಿರ ಪ್ರಕರಣಗಳ ನಿಖರ ಸುಳಿವು ಇಲ್ಲ.
ರಾಜ್ಯ ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕ ನಂಬಿಕೆ ಕುಗ್ಗುತ್ತಿದೆ ಎಂದು ಶಾಸಕರು ಚಿಂತೆ ವ್ಯಕ್ತಪಡಿಸಿದರು. “ ಕಳೆದ 8 ತಿಂಗಳಲ್ಲಿ ಒಬ್ಬ ACP ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವುದು ಗಂಭೀರ ವಿಚಾರ,” ಎಂದು ಅವರು ಹೇಳಿದರು.




ಅದೇ ವೇಳೆ ದಕ್ಷಿಣ ಕನ್ನಡದ SP ಡಾ. ಅರುಣ್ ಶಂಕರ, ಹಿಂದಿನ SP ಯತೀಶ್ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರ ಸೇವೆಯನ್ನು ಶಾಸಕರು ಶ್ಲಾಘಿಸಿದರು.
ರಾಜ್ಯದ ಭದ್ರತಾ ನಿರ್ವಹಣೆಯ ಗಂಭೀರ ವೈಫಲ್ಯಕ್ಕೆ ಉದಾಹರಣೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್ ಉಗ್ರನೊಬ್ಬ ಮೊಬೈಲ್ ಮೂಲಕ ವೀಡಿಯೋ ಕಾಲ್ ಮಾಡಿದ ಪ್ರಕರಣವನ್ನು ಶಾಸಕರು ಉಲ್ಲೇಖಿಸಿದರು. ಜೈಲು ನಿರ್ವಹಣೆಯಲ್ಲಿನ ದೌರ್ಬಲ್ಯವನ್ನು ಗೃಹಸಚಿವರ ಗಮನಕ್ಕೆ ತಂದರು.
PSI ನೇಮಕಾತಿ ಇನ್ನೂ ಪ್ರಾರಂಭವಾಗದಿರುವುದನ್ನು ಪ್ರಶ್ನಿಸಿದ ಶಾಸಕರು, ಯುವಕರ ಭವಿಷ್ಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಗೃಹಸಚಿವರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ನೀಡಿದ “spare parts ಆಗಿ ಮಾರಾಟವಾಗುತ್ತಿವೆ, Insurance claimಗಾಗಿ C-Report ತೆಗೆದುಕೊಳ್ಳುತ್ತಾರೆ” ಎಂಬ ಉತ್ತರವನ್ನು ಶಾಸಕರು ಸಂಪೂರ್ಣ ಅಸಮರ್ಪಕ ಎಂದು ತಿರಸ್ಕರಿಸಿದರು.
“ಸೀಟ್ಬೆಲ್ಟ್ ಹಾಕದಿದ್ದರೆ ದಂಡ ಹಾಕುವ ಪೊಲೀಸರು, ಕಳ್ಳರನ್ನು ಹಿಡಿಯಲು ಅಸಮರ್ಥರಾಗಿರುವುದು ಹೇಗೆ?” ಎಂದು ಶಾಸಕರು ಪ್ರಶ್ನಿಸಿದರು. ಹೊರರಾಜ್ಯ ಗಡಿಭಾಗಗಳಲ್ಲಿ CCTV ಹಾಗೂ ನಿಗಾವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.



