ಕಡಬ: ಶಿರಾಡಿ ಗ್ರಾಮದ ಉದನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳ ಸುವರ್ಣ ಮಹೋತ್ಸವ ಸುವರ್ಣ ಸಂಭ್ರಮ ಕಾರ್ಯಕ್ರಮ ಹಾಗೂ ಬಿಷಪ್ ಪೋಳಿಕಾರ್ಪಸ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಡಿಸೆಂಬರ್ 27ರಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಫಾ. ಹನಿ ಜೇಕಬ್ ತಿಳಿಸಿದ್ದಾರೆ.

ಅವರು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುವರ್ಣ ಮಹೋತ್ಸವದ ಅಂಗವಾಗಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಶಿರಾಡಿ ಘಾಟಿಯ ತಪ್ಪಲಿನ ಉದನೆಯಲ್ಲಿ ಹೈಸ್ಕೂಲ್ ಶಿಕ್ಷಣ ಮರೀಚಿಕೆಯಾಗಿದ್ದ ಸಂದರ್ಭದಲ್ಲಿ 1975ರಲ್ಲಿ ಹೊನ್ನಾವರ ಧರ್ಮಪ್ರಾಂತ್ಯದ ಧರ್ಮಗುರು ಫಾ. ಜಾರ್ಜ್ ಕೆ. ಜೆ. ಅವರು ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯನ್ನು ಆರಂಭಿಸಿದ್ದರು. ಆರಂಭದಲ್ಲಿ ಪೋತನ್ ಕೆ.ಟಿ. ಅವರ ಮನೆಯಲ್ಲಿ ಕಾರ್ಯನಿರ್ವಹಿಸಿದ ಈ ಸಂಸ್ಥೆ 1980ರವರೆಗೆ ಅಲ್ಲಿಯೇ ಮುಂದುವರಿದು, ಬಳಿಕ ಸ್ವಂತ ಕಟ್ಟಡದಲ್ಲಿ ಶೈಕ್ಷಣಿಕ ಸೇವೆ ಮುಂದುವರೆಸಿತು. ಸಂಸ್ಥೆಯ ಸ್ಥಾಪಕ ಮುಖ್ಯಶಿಕ್ಷಕರಾಗಿ ಚಾಕೋ ವರ್ಗೀಸ್ ಅವರು ಮಹತ್ವದ ಸೇವೆ ಸಲ್ಲಿಸಿದ್ದರು. 1978ರಲ್ಲಿ ಪ್ರಥಮ ಎಸ್‌ಎಸ್‌ಎಲ್‌ಸಿ ತಂಡವು ದಾಖಲೆಯ ಫಲಿತಾಂಶದೊಂದಿಗೆ ಹೊರಹೊಮ್ಮಿತ್ತು.

ಮುಂದುವರೆದು 2012ರಲ್ಲಿ ಬಿಷಪ್ ಪೋಳಿಕಾರ್ಪಸ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಸಹಸಂಸ್ಥೆಯಾಗಿ ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸಲಾಯಿತು. ಸಂಸ್ಥೆಯ ಸ್ಥಾಪಕರ ನಿಧನದ ಬಳಿಕ ಯಾಕೂಬ್ ಮಾರ್ ಅಂತೋನಿಯೊಸ್ ಅವರು ಜವಾಬ್ದಾರಿ ವಹಿಸಿಕೊಂಡು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ವಿದ್ಯಾಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ಫಾ. ಹನಿ ಜೇಕಬ್ ವಿವರಿಸಿದರು.

ಶಾಲಾ ಮುಖ್ಯಶಿಕ್ಷಕ ಶ್ರೀಧರ ಗೌಡ ಮಾತನಾಡಿ, ಡಿಸೆಂಬರ್ 15ರಂದು ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಾಮಚ್ಚನ್ ಎಂ. ಅವರು ಉದ್ಘಾಟಿಸಲಿದ್ದಾರೆ ಎಂದರು. ಡಿಸೆಂಬರ್ 16ರಂದು ಪೋಷಕರ ಕ್ರೀಡಾಕೂಟ, ಡಿಸೆಂಬರ್ 17ರಂದು ಪೂರ್ವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಕ್ರೀಡಾಕೂಟ ನಡೆಯಲಿದೆ. ಡಿಸೆಂಬರ್ 20ರಂದು ಪ್ರತಿಭಾ ಪುರಸ್ಕಾರ ಹಾಗೂ ಕ್ರಿಸ್ಮಸ್ ಆಚರಣೆ ನಡೆಯಲಿದ್ದು, ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಫಾ. ವರ್ಗೀಸ್ ಕೈಪನಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಡಿಸೆಂಬರ್ 27ರಂದು ನಡೆಯುವ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಹೊನ್ನಾವರ ಸೈಂಟ್ ಆಂಟನೀಸ್ ಎಜುಕೇಶನ್ ಸೊಸೈಟಿಯ ನಿರ್ದೇಶಕ ಬಿಷಪ್ ಯಾಕೋಬ್ ಮಾರ್ ಆಂತೊನಿಯೋಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶಶಿಧರ್ ಜಿ.ಎಸ್. ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿಮ್ಸನ್ ಗುಂಡ್ಯ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಹೂವಿನ ಮಜಲು, ಖಜಾಂಜಿ ಪ್ರವೀಣ್ ಕುಮಾರ್ ಅಡ್ಡಹೊಳೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *