ಪುತ್ತೂರು: ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ 5.50 ಕೋಟಿ ವೆಚ್ಚದಲ್ಲಿ ಪುತ್ತೂರು ತಾಲೂಕು ಪಂಚಾಯತ್‍ಗೆ ನಿರ್ಮಾಣಗೊಳ್ಳಲಿರುವ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನ ಕಾರ್ಯಕ್ರಮ ನಗರದ ಪರ್ಲಡ್ಕದಲ್ಲಿ ಶನಿವಾರ ನಡೆಯಿತು.

ಗುದ್ದಲಿ ಪೂಜೆ ನೆರವೇರಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮುಂದೆ ಜಿಲ್ಲಾ ಕೇಂದ್ರವಾಗುವತ್ತ ಹೆಜ್ಜೆಯಿಡುತ್ತಿರುವ ಪುತ್ತೂರಿಗೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ತಾಲೂಕು ಪಂಚಾಯತ್ ಕಟ್ಟಡ ಒಂದು ವರ್ಷದಲ್ಲಿ ನಿರ್ಮಾಣವಾಗಲಿದೆ. ಮೀಟಿಂಗ್ ಹಾಲ್, ಫರ್ನಿಚರ್ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕು. ಕಟ್ಟಡ ಮಂಜೂರಾತಿಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ಪ್ರಯತ್ನ ಹೆಚ್ಚು ಇದೆ. ನಗರ ವ್ಯಾಪ್ತಿಯಲ್ಲೇ ನಿರ್ಮಾಣವಾಗುತ್ತಿರುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ಮುಂದೆ ಸಿಟಿ ಬಸ್ಸು ಆರಂಭಿಸುವ ಯೋಚನೆಯೂ ಇದೆ ಎಂದು ಹೇಳಿದರು.
2000 ಸೈಟ್ ಗುರಿ
ನಿವೇಶನ ರಹಿತರಿಗೆ ಕನಿಷ್ಠ 3 ಸೆಂಟ್ಸ್ ಕೊಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಹಾಗೂ ಬಂಟ್ವಾಳ ವ್ಯಾಪ್ತಿಗಳಲ್ಲಿ 2 ಸಾವಿರ ಸೈಟ್‍ಗಳನ್ನು ನೀಡಲು ತಾ.ಪಂ.ಗೆ ಗುರಿ ನೀಡಲಾಗಿದೆ. ಸುಮಾರು 300 ಎಕರೆ ಜಾಗವನ್ನು ವಿವಿಧ ಪಂಚಾಯತ್ ವ್ಯಾಪ್ತಿಗಳಲ್ಲಿ ಗುರುತಿಸಲಾಗಿದೆ. ಇದು ರಾಜ್ಯದಲ್ಲೇ ಗುರುತಿಸಿಕೊಳ್ಳುವ ಯೋಜನೆಯಾಗಲಿದೆ ಎಂದು ಹೇಳಿದ ಶಾಸಕರು, ಅಧಿಕಾರಿಗಳು ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು.




ಇದೆ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎ.ಇ.ಇ. ಭರತ್ ಬಿ.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾ.ಪಂ.ನ ಭರತ್ ರಾಜ್, ತಾ.ಪಂ., ಗ್ರಾ.ಪಂ.ಗಳ ಅಧಿಕಾರಿಗಳು ಹಾಗೂ ಸಿಬಂದಿ, ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡರು.




