ಬಂಟ್ವಾಳ:
ವಿವಾಹ ಸಂಭ್ರಮದ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಆಘಾತಕಾರಿ ಘಟನೆ ಬಂಟ್ವಾಳ ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ಪ್ರದೇಶದಲ್ಲಿ ನಡೆದಿದೆ. ನಿಕಾಹ್ ಮುಗಿಸಿ ಮದುವೆ ಔತಣಕೂಟಕ್ಕೆ ಸಜ್ಜಾಗಿದ್ದ ಮದುಮಗಳು, ವರನ ಕಡೆಯಿಂದ ನೀಡಿದ್ದ ಚಿನ್ನಾಭರಣಗಳು ಹಾಗೂ ದುಬಾರಿ ಉಡುಗೊರೆಗಳೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿಯಂತೆ, ಡಿಸೆಂಬರ್ 12ರಂದು ಈ ಜೋಡಿಯ ನಿಕಾಹ್ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಡಿಸೆಂಬರ್ 14ರಂದು ಮಂಗಳೂರಿನ ತೊಕ್ಕೊಟ್ಟು ಯುನಿಟಿ ಹಾಲ್‌ನಲ್ಲಿ ಅದ್ದೂರಿ ಮದುವೆ ಸಮಾರಂಭ ಹಾಗೂ ಔತಣಕೂಟ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯವರು ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದ ವೇಳೆ, ಮದುಮಗಳು ಅಚಾನಕ್ ನಾಪತ್ತೆಯಾಗಿರುವುದು ಗೊತ್ತಾಗಿದೆ.

ಪರಾರಿಯಾದ ಯುವತಿ ವರನ ಕಡೆಯಿಂದ ನಿಕಾಹ್ ಸಂದರ್ಭದಲ್ಲಿ ನೀಡಲಾಗಿದ್ದ 10 ಪವನ್ ಚಿನ್ನ, ನಿಶ್ಚಿತಾರ್ಥದ ವೇಳೆ ನೀಡಿದ್ದ 7 ಪವನ್ ಚಿನ್ನಾಭರಣ, ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಸೇರಿದಂತೆ ಇತರೆ ಐಷಾರಾಮಿ ಉಡುಗೊರೆಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.

ಘಟನೆ ನಡೆದ ದಿನ ಮುಂಜಾನೆ ಸುಮಾರು ನಾಲ್ಕು ಗಂಟೆ ಸುಮಾರಿಗೆ ಮನೆಯವರು ನಿದ್ರೆಯಲ್ಲಿದ್ದ ಸಮಯದಲ್ಲಿ ಯುವತಿ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಮದುವೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದ ಸಂದರ್ಭದಲ್ಲೇ ವಧು ನಾಪತ್ತೆಯಾಗಿರುವುದು ಕುಟುಂಬಸ್ಥರನ್ನು ತೀವ್ರ ಆಘಾತಕ್ಕೆ ಒಳಪಡಿಸಿದೆ.

ಈ ಕುರಿತು ವರನ ಕಡೆಯವರು ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ

Leave a Reply

Your email address will not be published. Required fields are marked *