ಮಡಿಕೇರಿ: ವಿರಾಜಪೇಟೆ ಸಮೀಪದ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ನಡು ರಸ್ತೆಯಲ್ಲೇ ಪ್ರವಾಸಿ ಬಸ್ಸೊಂದು ಹೊತ್ತಿ ಉರಿದ ಘಟನೆ ಸಂಭವಿಸಿದ್ದು, ಭಾರೀ ದುರಂತ ತಪ್ಪಿದಂತಾಗಿದೆ.

ಕೇರಳ ನೋಂದಣಿಯ ಖಾಸಗಿ ಪ್ರವಾಸಿ ಬಸ್ ಇದಾಗಿದ್ದು, ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ ವಾಪಸ್ ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆ ಸಂಭವಿಸಿದ ಸಮಯದಲ್ಲಿ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಮಾತ್ರ ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಅಕಸ್ಮಾತ್ ಬಸ್ಸಿನಲ್ಲಿ ಪ್ರವಾಸಿಗರು ಇದ್ದಿದ್ದರೆ, ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಹೊತ್ತಿ ಉರಿದ ಪರಿಣಾಮ ಕೊಡಗು–ಕೇರಳ–ಮಾಕುಟ್ಟ ಮಾರ್ಗದಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ನಂತರ ಸಂಚಾರವನ್ನು ಸರಾಗಗೊಳಿಸಲಾಯಿತು.

ಘಟನೆಗೆ ನಿಖರ ಕಾರಣ ತಿಳಿದುಬರಬೇಕಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *