ಪುತ್ತೂರು:
ಬೆಂಗಳೂರು ಮೂಲದ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಡಿಸೆಂಬರ್ 17ರಂದು ಪುತ್ತೂರಿಗೆ ಆಗಮಿಸಲಿದೆ.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಹಾಗೂ ಪುತ್ತೂರಿನ ನಾಗರಿಕರು ಭವ್ಯ ಸ್ವಾಗತ ನೀಡಿ ಸೈಕ್ಲಿಂಗ್ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸ್ವದೇಶಿ ಬಳಸಿ, ದೇಶ ಬೆಳೆಸಿ’ ಎಂಬ ಘೋಷವಾಕ್ಯದಡಿ ಸಾಫ್ಟ್‌ವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯೋಪಯೋಗಿ ವಸ್ತುಗಳವರೆಗೆ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ, ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಸೈಕ್ಲಿಂಗ್ ಅಭಿಯಾನದಲ್ಲಿ ಸುಮಾರು 23 ಮಂದಿ ಪಾಲ್ಗೊಂಡಿದ್ದು, ಮಾಜಿ ಸೈನಿಕರು, ಬ್ಯಾಂಕ್ ಉದ್ಯೋಗಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ವೈದ್ಯರು ತಂಡದಲ್ಲಿದ್ದಾರೆ.

ಡಿ.17ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರು ದರ್ಬೆ ಬೈಪಾಸ್ ವೃತ್ತದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳು ಹಾಗೂ ಪುತ್ತೂರಿನ ನಾಗರಿಕರು ತಂಡವನ್ನು ಸ್ವಾಗತಿಸಲಿದ್ದಾರೆ. ಈ ವೇಳೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉಪಸ್ಥಿತರಿರಲಿದ್ದಾರೆ.

ದರ್ಬೆ ಬೈಪಾಸ್ ವೃತ್ತದಿಂದ ಪುತ್ತೂರು ಮುಖ್ಯರಸ್ತೆಯಾಗಿ ನೆಹರುನಗರದಲ್ಲಿರುವ ವಿವೇಕಾನಂದ ಕಾಲೇಜು ಅವರಣದವರೆಗೆ ಸೈಕಲ್ ಜಾಥಾ ನಡೆಯಲಿದ್ದು, ಪುತ್ತೂರಿನ ನಾಗರಿಕರಿಗೆ ಜಾಥಾದಲ್ಲಿ ಭಾಗವಹಿಸಲು ಅವಕಾಶವಿದೆ. ಜಾಥಾ ಕಾಲೇಜು ತಲುಪಿದ ಬಳಿಕ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ತಂಡದ ಸದಸ್ಯರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ರವೀಂದ್ರ ಪಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಸಮಿತಿ ಕೋಶಾಧಿಕಾರಿ ನರಸಿಂಹ ಪೈ, ಇಂಜಿನಿಯರಿಂಗ್ ಆಡಳಿತ ಸಮಿತಿ ಅಧ್ಯಕ್ಷ ವಿಶ್ವಾಸ್ ಶೆಣೈ, ಸದಸ್ಯ ರವಿಕೃಷ್ಣ ಕಲ್ಲಾಜೆ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *