ಉಪ್ಪಿನಂಗಡಿ: ಇಲ್ಲಿನ ಉಭಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ನೀಡಿದ ತೀರ್ಪಿಗೆ ಅಸಮಾಧಾನಗೊಂಡು ಇಬ್ಬರು ಪ್ರೇಕ್ಷಕರು ಅಂಪೈರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸೆಮಿ ಫೈನಲ್‌ನಲ್ಲಿ ಕಾನಾ ಮತ್ತು ಕೆಜಿಎಫ್ ತಂಡಗಳ ನಡುವೆ ರೋಚಕ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಂಪೈರ್ ರೋಲನ್ ಪಿಂಟು ಅವರು ಬ್ಯಾಟ್ಸ್ಮನ್ ಒಬ್ಬರಿಗೆ ಎಲ್‌ಬಿಡಬ್ಲ್ಯೂ ಔಟ್ ತೀರ್ಪು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಜಸ್ಟಿನ್ ಮತ್ತು ಶರೀಫ್ ಎಂಬವರು ಪ್ರೇಕ್ಷಕರ ಗ್ಯಾಲರಿಯಿಂದ ಏಕಾಏಕಿ ಮೈದಾನಕ್ಕೆ ನುಗ್ಗಿ ಅಂಪೈರ್ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಈ ಸಂಬಂಧ ಅಂಪೈರ್ ರೋಲನ್ ಪಿಂಟು ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನಲ್ಲೇ, ಜಸ್ಟಿನ್ ಮತ್ತು ಶರೀಫ್ ಅವರು ಉಭಾರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ರೋಲನ್ ಪಿಂಟು ಅವರ ಅಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳ ಸಮಕ್ಷಮ ಅಂಪೈರ್ ರೋಲನ್ ಪಿಂಟು ಅವರಲ್ಲಿ ಕ್ಷಮೆ ಕೋರಿದರು.

ಕ್ರೀಡಾ ಹುಮ್ಮಸ್ಸಿನಿಂದ ಉದ್ವೇಗಕ್ಕೆ ಒಳಗಾಗಿ ತಾವು ಈ ಕೃತ್ಯ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದರು. ಈ ಮೂಲಕ ಅಂಪೈರ್ ಮೇಲಿನ ಹಲ್ಲೆ ಯತ್ನ ಪ್ರಕರಣವು ಕ್ಷಮೆಯ ಮೂಲಕ ಸುಖಾಂತ್ಯ ಕಂಡಿತು.

Leave a Reply

Your email address will not be published. Required fields are marked *