ಪುತ್ತೂರು: ನಗರಸಭೆಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ 41.3 ಲಕ್ಷ ರೂ. ವೆಚ್ಚದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಅನುಮೋದನೆ ನೀಡಿ ಇ-ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಗುತ್ತಿಗೆ ಯಾರ ಪಾಲಾಗುತ್ತದೆ ಎಂಬುದು ಸ್ಪಷ್ಟವಾಗುವ ಮೊದಲೇ ಶಾಸಕರು ತಮ್ಮ ಆಪ್ತ ಗುತ್ತಿಗೆದಾರರಿಗೆ ಕಾಮಗಾರಿ ನೀಡುವಂತೆ ಪೌರಾಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ದೊಡ್ಡ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕವೇ ನೀಡಬೇಕು. ತಮಗೆ ಇಷ್ಟವಾದವರಿಗೆ ನೇರವಾಗಿ ಕಾಮಗಾರಿ ನೀಡಲು ಅವಕಾಶವಿಲ್ಲ. ಶಾಸಕರು ಹೇಳಿದವರಿಗೆ ಕಾಮಗಾರಿ ನೀಡುವುದು ಅವರ ಸ್ವಂತ ಹಣದಿಂದ ನಡೆಯುವ ಕೆಲಸವೇ ಎಂದು ಪ್ರಶ್ನಿಸಿದರು. ಬಿಜೆಪಿ ಆಡಳಿತ ಮಂಡಳಿ ಮಂಜೂರು ಮಾಡಿದ ಕಾಮಗಾರಿಯಲ್ಲಿ ಶಾಸಕರು ಅನಗತ್ಯವಾಗಿ ಮೂಗು ತೂರಿಸುವ ಅಗತ್ಯವೇನು? ನಗರಸಭೆಯ ಆಡಳಿತಾಧಿಕಾರಿ ಜಿಲ್ಲಾಧಿಕಾರಿಯೇ ಹೊರತು ಶಾಸಕರಲ್ಲ ಎಂದು ಅವರು ಸ್ಪಷ್ಟಪಡಿಸಿದರು.




ಇದಲ್ಲದೆ, ಜಿಲ್ಲಾಧಿಕಾರಿ ಕಣ್ಣುಮುಚ್ಚಿ ಬಿಲ್ ನೀಡುತ್ತಾರೆಯೇ? ಅವರು ಶಾಸಕರ ಚೇಲಾ ಅಧಿಕಾರಿಗಳೇ ಎಂದು ವ್ಯಂಗ್ಯವಾಡಿದ ಸುಂದರ ಪೂಜಾರಿ, ಶಾಸಕರು ಕೇವಲ ಪ್ರಚಾರ ಪಡೆಯುವ ಧಾವಂತದಲ್ಲಿದ್ದಾರೆ. ಯಾರೇ ಕಾಮಗಾರಿ ನಡೆಸಿದರೂ ‘ಅದನ್ನು ನಾನೇ ಮಾಡಿಸಿದ್ದು’ ಎಂದು ಪೋಸ್ ಕೊಡುವುದು ಅವರ ಚಾಳಿಯಾಗಿದೆ ಎಂದು ಆರೋಪಿಸಿದರು.
ಶಾಸಕರ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ 2000 ಕೋಟಿ ರೂ. ಅನುದಾನ ಬಂದಿದೆ ಎನ್ನುವುದು ಸುಳ್ಳು. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಕು. ಬೈದು, ಒತ್ತಡ ಹಾಕಿ ರಾಧಣ್ಣರವರಲ್ಲಿ ಡಾಂಬರು ಪ್ಯಾಚ್ ವರ್ಕ್ ಮಾಡಿಸಿದ್ದೀರಲ್ಲ, ಅದರ ಟೆಂಡರ್ ಇನ್ನೂ ಓಪನ್ ಆಗಿಲ್ಲ. ಆ ಟೆಂಡರ್ ಬೇರೆಯವರಿಗೆ ಬಂದರೆ ಏನು ಮಾಡುತ್ತೀರಿ ಶಾಸಕರೇ ಎಂದು ಸುಂದರ ಪೂಜಾರಿ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಶಶಿಧರ ನಾಯಕ್, ಯುವರಾಜ್ ಪೆರಿಯತ್ತೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




