ಸುಳ್ಯ: ರೈತರಿಗೆ ಬೆಲೆ ವಿಮೆ ಹಣ ಕಡಿಮೆ ಪಾವತಿಯಾಗುತ್ತಿರುವುದು ಹಾಗೂ ವಿಳಂಬವಾಗುತ್ತಿರುವ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿಯ ವತಿಯಿಂದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಹಾಗೂ ಸುಳ್ಯ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು.




ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ನಿರ್ಲಕ್ಷದಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಚರ್ಚೆ ನಡೆಯಿತು. ಗ್ರಾಮ ಮಟ್ಟದಲ್ಲಿ ರೈತರಿಂದ ಸಂಗ್ರಹಿಸಿರುವ ಮಾಹಿತಿ ಹಾಗೂ ದಾಖಲೆಗಳನ್ನು ಆಧರಿಸಿ, ರೈತರ ಬೆಲೆ ವಿಮೆ ಪಾವತಿಯಲ್ಲಿ ಆಗಿರುವ ವಿಳಂಬ ಮತ್ತು ತಾರತಮ್ಯದ ವಿರುದ್ಧ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರೀಶ್ ಕಂಜಿಪಿಲಿ, ಸಹಕಾರ ಭಾರತಿ ಅಧ್ಯಕ್ಷ ಸೋಮಶೇಖರ್ ಕೂಜುಗೋಡು, ಕ್ಯಾಂಪ್ಕೋ ನಿರ್ದೇಶಕ ಎ.ವಿ. ತೀರ್ಥರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.




