ಹೈದರಾಬಾದ್: ಪ್ಯಾನ್ ಇಂಡಿಯಾ ದಾಖಲೆ ಬರೆದ ‘ಕೆಜಿಎಫ್ ಚಾಪ್ಟರ್–2’ ಚಿತ್ರದ ಸಹ ನಿರ್ದೇಶಕರಾದ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಆಕಸ್ಮಿಕವಾಗಿ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ.

ಮೃತ ಬಾಲಕನನ್ನು ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಎಂದು ಗುರುತಿಸಲಾಗಿದೆ. ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ಅವರ ಏಕೈಕ ಪುತ್ರನಾಗಿದ್ದ ಚಿರಂಜೀವಿ ಸೋನಾರ್ಷ್ ಲಿಫ್ಟ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪುತ್ರನನ್ನು ಕಳೆದುಕೊಂಡಿರುವ ಕೀರ್ತನ್ ನಾಡಗೌಡ ಅವರ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದ್ದು, ಈ ದುರ್ಘಟನೆಯ ಸುದ್ದಿ ತಿಳಿದ ಕೂಡಲೇ ಅನೇಕ ಚಲನಚಿತ್ರ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೀರ್ತನ್ ನಾಡಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಯಶಸ್ಸು ಗಳಿಸಿದ ‘ಕೆಜಿಎಫ್’ ಚಿತ್ರದ ಎರಡನೇ ಭಾಗದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

Leave a Reply

Your email address will not be published. Required fields are marked *