ಪುತ್ತೂರು: ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನ ಬಾಗಿಲು ನಿವಾಸಿಗಳಾದ ರಾಧಾಮ್ಮ–ಮುತ್ತುಸ್ವಾಮಿ ವೃದ್ಧ ದಂಪತಿಯ ಮನೆಗೆ ಸಂಬಂಧಿಸಿದಂತೆ ನ್ಯಾಯ ಸಿಗದೆ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಹಾಗೂ ನೊಂದ ಕುಟುಂಬಕ್ಕೆ ತಕ್ಷಣ ನ್ಯಾಯ ಒದಗಿಸುವಂತೆ ಆಗ್ರಹಿಸಿ ಡಿಸೆಂಬರ್ 22ರಂದು ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನೀತಿ ತಂಡದ ಜಯಂತ್ ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೌಕ್ರಾಡಿ ಗ್ರಾಮದ ಸರ್ವೆ ನಂ. 123/1ರಲ್ಲಿ ಮಲೆಕುಡಿಯ ಜನಾಂಗದವರು ಸುಮಾರು 200 ವರ್ಷಗಳಿಂದ ವಾಸವಾಗಿದ್ದು, ಅದೇ ಪ್ರದೇಶದ 29 ಸೆಂಟ್ಸ್ ಜಾಗದಲ್ಲಿ ರಾಧಾಮ್ಮ ಅವರು ಗುಡಿಸಲು ಮನೆಯಲ್ಲಿ ಜೀವನ ನಡೆಸುತ್ತಿದ್ದರು. 2021ರಲ್ಲಿ ಇದೇ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಲಾಗಿತ್ತು. ಈ ಕುಟುಂಬಕ್ಕೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಸೇರಿದಂತೆ ಸರ್ಕಾರದ ಎಲ್ಲಾ ಮೂಲಭೂತ ಸೌಲಭ್ಯಗಳು ಕಾನೂನುಬದ್ಧವಾಗಿ ದೊರೆತಿದ್ದವು. ಜಾಗಕ್ಕೆ ಸಂಬಂಧಿಸಿ 94ಸಿ ಅಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ 2015ರ ಹಿಂದಿನಿಂದ ವಾಸವಾಗಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಅಕ್ರಮ–ಸಕ್ರಮ ಯೋಜನೆಯಡಿಯಲ್ಲಿ ಸಹ ಅರ್ಜಿ ಸಲ್ಲಿಸಿದ್ದರೂ, ಕಡಬ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು 2024ರ ನವೆಂಬರ್ 13ರಂದು ಮನೆ ನೆಲಸಮಗೊಳಿಸಿದ್ದರು. ಈ ಕುರಿತು ಮುಖ್ಯಮಂತ್ರಿಗಳಿಂದ ಹಿಡಿದು ವಿವಿಧ ಇಲಾಖೆಗಳವರೆಗೆ ದೂರು ನೀಡಿದರೂ ನ್ಯಾಯ ದೊರಕಿಲ್ಲ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಡಿಸೆಂಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಪುತ್ತೂರು ಎಸಿ ಕಚೇರಿ ಇರುವ ಕಂದಾಯ ಇಲಾಖೆಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ವೃದ್ಧ ದಂಪತಿ ಹಾಗೂ ಅವರ ಮಕ್ಕಳು ಭಾಗವಹಿಸಲಿದ್ದಾರೆ ಎಂದು ಜಯಂತ್ ಟಿ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ನೊಂದ ಕುಟುಂಬದ ಮುತ್ತುಸ್ವಾಮಿ ಅವರು, ಮನೆ ಧ್ವಂಸ ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ, ತಾವು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲೇ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ತಮ್ಮ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಧಾಮ್ಮ ಮತ್ತು ಮುತ್ತುಸ್ವಾಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *